ಕೊಚ್ಚಿ: ಮಲಯಾಳಂ ಸುದ್ದಿವಾಹಿನಿ ಮೀಡಿಯಾ ವನ್ ಚಾನೆಲ್ ನ ಪರವಾನಗಿಯನ್ನು ರದ್ದುಪಡಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿರ್ಧಾರವನ್ನು ಕೇರಳ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ.
ಇಂದು ಬೆಳಿಗ್ಗೆ ಮುಕ್ತ ನ್ಯಾಯಾಲಯದಲ್ಲಿ ನ್ಯಾ. ಎನ್ ನಗರೇಶ್ ಅವರ ಏಕಸದಸ್ಯ ಪೀಠ ಈ ಕುರಿತ ತೀರ್ಪು ನೀಡಿದೆ. ಈ ವೇಳೆ ನ್ಯಾಯಮೂರ್ತಿ ಎನ್ ನಗರೇಶ್ “ನಾನು ಕಡತಗಳನ್ನು ಪರಿಶೀಲಿಸಿದ್ದೇನೆ. ಸಚಿವಾಲಯವು ವಿವಿಧ ಬೇಹುಗಾರಿಕಾ ಸಂಸ್ಥೆಗಳಿಂದ ವರದಿಯನ್ನು ಪಡೆದಿದೆ. ಆ ವರದಿಗಳ ಆಧಾರದಲ್ಲಿ ಭದ್ರತಾ ಅನುಮತಿ ನವೀಕರಿಸಬಾರದು ಎಂದು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಸಮರ್ಥಿಸುವಂತಹ ಅಂಶಗಳಿವೆ. ಹಾಗಾಗಿ ನಾನು ಈ ಮನವಿಯನ್ನು ವಜಾಗೊಳಿಸುತ್ತೇನೆ” ಎಂದು ಹೇಳಿದರು.
ಚಾನೆಲ್ ಆಡಳಿತ ಮಂಡಳಿ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು ಕೇಂದ್ರದಿಂದ ಸ್ಪಷ್ಟೀಕರಣ ಕೋರಿ ಚಾನೆಲ್ ವಿರುದ್ಧದ ಕ್ರಮವನ್ನು ಬುಧವಾರದವರೆಗೆ ತಾತ್ಕಾಲಿಕವಾಗಿ ವಿಸ್ತರಿಸಲಾಗಿತ್ತು . ಆದರೆ ಕೇಂದ್ರ ಸರ್ಕಾರವು ವಾಹಿನಿಯ ಪರವಾನಗಿಯನ್ನು ರದ್ದುಪಡಿಸಲು ಕಾರಣವಾಗಿರುವ ಗೃಹಸಚಿವಾಲಯದಿಂದ ತಿಳಿದು ಬಂದ ರಾಷ್ಟ್ರೀಯ ಭದ್ರತೆಗೆ ಎರವಾಗುವಂತಹ ಖಚಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಕೇಂದ್ರ ಸರ್ಕಾರ ಕೈಗೊಂಡ ಕ್ರಮವು ಪತ್ರಿಕಾ ಸ್ವಾತಂತ್ರ್ಯದ ವಿರುದ್ಧದ ಸವಾಲಾಗಿದ್ದು 300 ಕ್ಕೂ ಹೆಚ್ಚು ಉದ್ಯೋಗಿಗಳ ಜೀವನೋಪಾಯಕ್ಕೆ ತಡೆಯುಂಟುಮಾಡಿದೆ ಎಂದು ಮೀಡಿಯಾ ವನ್ ಸಂಪಾದಕ ಮತ್ತು ಪತ್ರಕರ್ತರ ಒಕ್ಕೂಟ ನ್ಯಾಯಾಲಯಕ್ಕೆ ತಿಳಿಸಿತ್ತು.
ಆದರೆ ಸರ್ಕಾರದ ಪರ ವಾದಿಸಿದ ವಕೀಲರು ಅರ್ಜಿ ಸ್ವೀಕೃತವಾಗುವುದಿಲ್ಲ ಎಂದು ವಾದಿಸಿದರು.ಕೇಂದ್ರದ ಕ್ರಮವನ್ನು ಪ್ರಶ್ನಿಸಿ ನೌಕರರು ಮತ್ತು ಒಕ್ಕೂಟಗಳಿಗೆ ನ್ಯಾಯಾಲಯದ ಮುಂದೆ ಬರಲು ಸಾಧ್ಯವಿಲ್ಲ.ಇದು ಕಂಪನಿ ಮತ್ತು ಸರ್ಕಾರದ ನಡುವಿನ ವಿಷಯ.ನೌಕರಗಿಗೆ ಅಸಮಾಧಾನಗಳಿದ್ದರೆ ಉದ್ಯೋಗದಾತರನ್ನು ಸಂಪರ್ಕಿಸಬೇಕು ಎಂದು ಸರ್ಕಾರದ ಪರ ವಾದಿಸಿದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು