ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮದುವೆ, ಮಂದಿರ, ಮಸೀದಿಗಳ ಮೇಲೆ ನಿಯಂತ್ರಣ ಹೇರಲು ಚಿಂತನೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಸ್ಮಾರ್ಟ್ ಪದ್ಮನಾಭ ನಗರ ಕಾರ್ಯಕ್ರಮದಡಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ದೋಬಿ ಘಾಟ್ ಬಳಿ ರಾಷ್ಟ್ರೀಯ ಯುವ ಪ್ರತಿಷ್ಠಾನದಿಂದ ಕೋವಿಡ್ ಸಾಂಕ್ರಾಮಿಕದಿಂದ ಆನ್ ಲೈನ್ ಕಲಿಕೆಯಿಂದ ವಂಚಿತರಾದ 100 ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ. ರಾಷ್ಟ್ರೀಯ ಯುವ ಪ್ರತಿಷ್ಠಾನದ ಸಂಸ್ಥಾಪಕ ಪ್ರಮೋದ್ ಶ್ರೀನಿವಾಸ್, ಬಿಬಿಎಂಪಿ ಮಾಜಿ ಸದಸ್ಯ ಎಲ್. ಶ್ರೀನಿವಾಸ್ ಅವರ ಜತೆ ಟ್ಯಾಬ್ ವಿತರಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮಗಳಿಗೆ ಸರ್ಕಾರ ಒತ್ತು ನೀಡಿದೆ. ಈಗಿನ ಪರಿಸ್ಥಿತಿಯಲ್ಲಿ ಮಂದಿರ, ಮಸೀದಿಗಳ ಮೇಲೆ ನಿರ್ಬಂಧ ಹೇರಲು ಚಿಂತನೆ ನಡೆಸಲಾಗುತ್ತಿದೆ. ಮದುವೆಯಂತಹ ಜನನಿಬಿಢ ಕಾರ್ಯಕ್ರಮಗಳು, ಪ್ರದೇಶಗಳಲ್ಲಿ ನಿಯಂತ್ರಣ ಹೇರಲಾಗುತ್ತಿದೆ ಎಂದರು.
ಸೋಂಕು ತಡೆಗೆ ಕಠಿಣ ನಿಯಂತ್ರಣ ಸರ್ಕಾರದ ಆದ್ಯತೆಯಾಗಿದ್ದು,ಲಾಕ್ ಡೌನ್ ಹೇರುವುದು ಸರ್ಕಾರದ ಕೊನೆಯ ಪರ್ಯಾಯ ಕ್ರಮವಾಗಿದೆ. ಎಲ್ಲರೂ ಸರ್ಕಾರದ ಮಾರ್ಗಸೂಚಿಯನ್ನು ಪರಿಪಾಲಿಸಬೇಕು ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ರಾಷ್ಟ್ರೀಯ ಯುವ ಪ್ರತಿಷ್ಠಾನದ ಸೇವಾ ಚಟುವಟಿಕೆ ಅತ್ಯಂತ ಉಪಯುಕ್ತವಾಗಿದೆ. ಬಡವರ ಶಿಕ್ಷಣಕ್ಕೆ ನೆರವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಆರ್. ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರೀಯ ಯುವ ಪ್ರತಿಷ್ಠಾನದ ಸಂಸ್ಥಾಪಕ ಪ್ರಮೋದ್ ಶ್ರೀನಿವಾಸ್ ಮಾತನಾಡಿ., ಇಲ್ಲಿನ 13 ವರ್ಷದ ಬಾಲಕಿ ಮೇಘ ಪ್ರೌಢ ಶಿಕ್ಷಣ ಮಂಡಳಿಯ 10 ನೇ ತರಗತಿಗೆ ಸಜ್ಜಾಗಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಈಕೆಯ ಬಳಿ ಸ್ಮಾರ್ಟ್ ಫೋನ್ ಇರಲಿಲ್ಲ. ತಂದೆ ಆಟೋ ಚಾಲಕರಾಗಿದ್ದು, ಕೋವಿಡ್ ಎರಡನೇ ಅಲೆ ಲಾಕ್ ಡೌನ್ ಸಂದರ್ಭದಲ್ಲಿ ಕೆಲಸವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿತ್ತು ಇಂದು ತಮಗೆ ಸೇವಾ ಚಟುವಟಿಕೆ ಕೈಗೊಳ್ಳಲು ಸ್ಪೂರ್ತಿಯಾಯಿತು ಎಂದರು.
ಇದೇ ರೀತಿಯ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಸಹ ಸಂಕಷ್ಟದಲ್ಲಿದ್ದಾರೆ. ಸ್ಮಾರ್ಟ್ ಫೋನ್ ಖರೀದಿಸಲು ಶಕ್ತಿ ಇಲ್ಲದ 100 ಅರ್ಹ ಫಲಾನುಭವಿಗಳನ್ನು ಸಂಸ್ಥೆ ಗುರುತಿಸಿ ಸೌಲಭ್ಯ ಕಲ್ಪಿಸಿದೆ. ಶಿಕ್ಷಣ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ 93.01 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ 33 ರಷ್ಟು ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಗಳಿಲ್ಲ. ಹೀಗಾಗಿ ಕೋವಿಡ್ ಸಂದರ್ಭದಲ್ಲಿ ಕಲಿಕೆಯಿಂದ ಹಿಂದುಳಿದಿದ್ದಾರೆ. ಇದನ್ನು ಮನಗಂಡು ಉಚಿತ ಟ್ಯಾಬ್ ವಿತರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡುವಂತಾಗಿದೆ ಎಂದು ಹೇಳಿದರು.