Home ಟಾಪ್ ಸುದ್ದಿಗಳು ಜನರ ಬದುಕಿನ ಮೇಲೆ ಕ್ರಿಮಿನಲ್ ದಾಳಿ ನಡೆಸುತ್ತಿರುವ ಸರಕಾರವನ್ನು ಕಿತ್ತೆಸೆಯಬೇಕು: ತಪನ್ ಸೇನ್

ಜನರ ಬದುಕಿನ ಮೇಲೆ ಕ್ರಿಮಿನಲ್ ದಾಳಿ ನಡೆಸುತ್ತಿರುವ ಸರಕಾರವನ್ನು ಕಿತ್ತೆಸೆಯಬೇಕು: ತಪನ್ ಸೇನ್

ಬೆಂಗಳೂರು: ಜನರ ಬದುಕಿನ ಮೇಲೆ ಕ್ರಿಮಿನಲ್ ದಾಳಿ ನಡೆಸುತ್ತಿರುವ ಸರಕಾರವನ್ನು ಕಿತ್ತೆಸೆಯಬೇಕು ಎಂದು ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಕರೆ ನೀಡಿದ್ದಾರೆ.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.


ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) 17ನೇ ಅಖಿಲ ಭಾರತ ಸಮ್ಮೇಳನ ಬೆಂಗಳೂರಿನ ಅರಮನೆ ಮೈದಾನ (ಗಾಯತ್ರಿ ವಿಹಾರ)ದ ರಂಜನ ನಿರುಲಾ ಮತ್ತು ರಘುನಾಥ್ ಸಿಂಗ್ ವೇದಿಕೆ – ಶ್ಯಾಮಲ್ ಚಕ್ರವರ್ತಿ ನಗರದಲ್ಲಿ ನಡೆಯುತ್ತಿದೆ. ಸಮ್ಮೇಳನದ ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.


ತಪನ್ ಸೇನ್ ಮಾತನಾಡಿ, ದೇಶದ ಆಳುವ ಸರಕಾರಗಳು ನವ ಉದಾರವಾದಿ ನೀತಿಗಳ ಏಜೆಂಟರಂತೆ, ಕಾರ್ಪೋರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಜನಗಳು ದಿವಾಳಿ ಆಗುತ್ತಿದ್ದಾರೆ. ದೇಶದ ಮುಖ್ಯವಾಹಿನಿ ಮಾಧ್ಯಮಗಳ ದೊಡ್ಡ ವಿಭಾಗವೂ ಇದಕ್ಕೆ ಬೆಂಬಲ ನೀಡುತ್ತಿದೆ. ಇಂತಹ ವಿಷಕಾರಿ ನೀತಿಗಳ ಪರಿಣಾಮಗಳ ವಿರುದ್ಧ, ಸರ್ವಾಧಿಕಾರಿ ರೀತಿಯಲ್ಲಿ ನಡೆದುಕೊಳ್ಳುತ್ತಾ, ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಸರಕಾರದ ನೀತಿಗಳು ಜಾರಿಗೊಳ್ಳುತ್ತಿವೆ ಎಂದು ಆರೋಪಿಸಿದರು.


ಆಳುವ ಸರ್ಕಾರವು ಜನರ ಒಗ್ಗಟ್ಟನ್ನು ಮುರಿಯುವ ವಿಭಜನಕಾರಿ ನೀತಿಗಳನ್ನು ಹೇರುತ್ತಾ ಸಮಾಜದ ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡಹುತ್ತಿದೆ. ದೇಶದ ಹಿತಾಸಕ್ತಿಗೆ ಮತ್ತು ದುಡಿಯುವ ವರ್ಗದ ಹಿತಗಳಿಗೆ ವಿರುದ್ಧವಾಗಿ ಇಂತಹ ಕ್ರಿಮಿನಲ್ ದಾಳಿಗಳನ್ನು ನಡೆಸುತ್ತಿರುವ ಸರಕಾರವನ್ನು ರೈತ-ಕಾರ್ಮಿಕ ಚಳುವಳಿಯ ಸಖ್ಯತೆಯೊಂದಿಗೆ ಅಧಿಕಾರದಿಂದ ಕಿತ್ತೆಸೆಯಲಾಗುವುದು ಎಂದು ತಿಳಿಸಿದ ತಪನ್ ಸೇನ್, ಈ ನಿಟ್ಟಿನಲ್ಲಿ ಕಾರ್ಮಿಕ ಹೋರಾಟಗಳನ್ನು ಬಲಪಡಿಸುವ ಕುರಿತು ಸಿಐಟಿಯು ಸಂಘಟನೆಯ 17 ನೇ ಅಖಿಲ ಭಾರತ ಸಮ್ಮೇಳನವು ಗಂಭೀರವಾಗಿ ಚರ್ಚಿಸಲಿದೆ ಎಂದೂ ಹೇಳಿದರು.
ದೇಶದ ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟವು ಒಂದುಗೂಡಿ ಕಾರ್ಮಿಕರ ಹಕ್ಕುಗಳು, ರೈತರ ಹಕ್ಕುಗಳು ಮಾತ್ರವಲ್ಲ. ದೇಶದ ರಕ್ಷಣೆಗಾಗಿ ದೇಶವಿರೋಧಿ ಕುತಂತ್ರಗಳ ವಿರುದ್ಧ ಹೋರಾಟ ರೂಪಿಸಲಿವೆ. ಇತ್ತೀಚಿನ ಎರಡು ದಿನಗಳ ದೇಶವ್ಯಾಪಿ ಯಶಸ್ವಿ ಮುಷ್ಕರ ಈ ಹೋರಾಟದ ಭಾಗವಾಗಿದೆ. ನಾಲ್ಕು ವರ್ಷಗಳ ಹೋರಾಟದ ಅನುಭವವು – ವಿದ್ಯುತ್ – ಕಲ್ಲಿದ್ದಲು ಮುಂತಾದ ಕ್ಷೇತ್ರದಲ್ಲಿ ಸರಕಾರದ ಧೋರಣೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯ ಹಾಗೂ ಯಾವುದೇ ರಂಗದಲ್ಲೇ ಇರಲಿ ಹಿಮ್ಮೆಟ್ಟಿಸಲು ಸಾಧ್ಯ ಎಂದು ತೋರಿಸಿಕೊಟ್ಟಿದೆ. ನವ ಉದಾರೀಕರಣ ನೀತಿಗಳ ಸವಾಲು ಕೇವಲ ಕಾರ್ಮಿಕ ವರ್ಗಕ್ಕೆ ಮಾತ್ರ ಸೀಮಿತವಲ್ಲ. ಇದು ಇಡೀ ಮನುಕುಲದ ಮುಂದಿನ ಸವಾಲು. ಪ್ರಜಾಸತ್ತಾತ್ಮಕ ಸಮಾಜಕ್ಕೆ ಮಾರಕ. ಕೆಲವು ಸ್ವದೇಶಿ ಮತ್ತು ವಿದೇಶಿ ಕಾರ್ಪೋರೇಟ್ ಹಿತರಕ್ಷಣೆಗಾಗಿ, ವಿಶಾಲ ಜನ ಸಮುದಾಯಗಳ ಜನರ ಹಿತ ಬಲಿ ಕೊಡಲಾಗುತ್ತಿದೆ. ದೇಶದ ಕಾರ್ಮಿಕ ಚಳುವಳಿಯ ಸರಕಾರವು ದೇಶವನ್ನು ಮಾರಲು ಅವಕಾಶ ನೀಡಲಾಗದು ಎಂದು ತಪನ್ ಸೇನ್ ಹೇಳಿದರು.


ಉದ್ಘಾಟನಾ ಸಮಾರಂಭದ ಸಭೆಯ ಸಿ.ಐ.ಟಿ.ಯು. ಅಖಿಲ ಭಾರತ ಅಧ್ಯಕ್ಷೆ ಡಾ. ಕೆ. ಹೇಮಲತಾ ಮಾತನಾಡಿ, ಭಾರತದಲ್ಲಿ ಹೆಚ್ಚುತ್ತಿರುವ ಅಸಮಾನತೆ, ಸಂಪತ್ತಿನ ಕೇಂದ್ರೀಕರಣ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ವರ್ಗದ ಐಕ್ಯ ಹೋರಾಟವನ್ನು ಬಲಗೊಳಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರ ಅರ್ಥ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ
ಐಎನ್’ಟಿಯುಸಿ ಮುಖಂಡ ಚಂದ್ರಶೇಖರನ್ ಮಾತನಾಡಿ, ಕೇಂದ್ರ ಸರ್ಕಾರ ದೇಶದ ಅರ್ಥ ವ್ಯವಸ್ಥೆಗೆ ತುಂಬಾ ಹಾನಿಯುಂಟು ಮಾಡಿದೆ. ಪ್ರತಿಯೊಂದು ಸಮುದಾಯವನ್ನು ವಿಭಜಿಸುತ್ತಿದೆ. ಈ ಹಿಂದಿನ ಸರ್ಕಾರಗಳು ಮಾಡಿದ ಯೋಜನೆಗಳನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದರು.
ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳಿಂದ ಕಾರ್ಮಿಕ ವರ್ಗ ಇಂದು ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ. ದೇಶವನ್ನು ಕೋಮುವಾದ ಆವರಿಸಿದೆ. ಕಾರ್ಮಿಕ ಹಕ್ಕುಗಳ ರಕ್ಷಣೆಗಾಗಿ ಇದ್ದ 26 ಕಾನೂನುಗಳನ್ನು ಬದಲಾವಣೆ ಮಾಡಿ ನಾಲ್ಕು ನೀತಿ ಸಂಹಿತೆಗಳನ್ನಾಗಿ ಮಾಡಲಾಗಿದೆ. ಇದರಿಂದ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ. ದೇಶವಿರೋಧಿ ಕಾರ್ಮಿಕ ವಿರೋಧಿ ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಟೀಕಿಸಿದರು.


ಎಐಟಿಯುಸಿಯ ಅಮರ್’ಜಿತ್ ಕೌರ್ ಮಾತನಾಡಿ, ದೇಶದಲ್ಲಿ ಇಂದಿನ ಪರಿಸ್ಥಿತಿ ತುಂಬಾತುಂಬಾ ವಿಷಮವಾಗಿದೆ. ಸಾರ್ವಜನಿಕ ವಲಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ದಿನಗೂಲಿ ನೌಕರರು ಉದ್ಯೋಗ ಸಿಗದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ನಿರುದ್ಯೋಗದ ಪ್ರಮಾಣ ದಿನೇದಿನೇ ಏರಿಕೆ ಕಂಡಿದೆ. ಹಾಗಿದ್ದರೂ ಕೇಂದ್ರ ಸರ್ಕಾರ ಖಾಸಗೀಕರಣದ ಹಾದಿಯನ್ನು ಕೈಬಿಟ್ಟಿಲ್ಲ ಎಂದರು.
ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್(ಐಎನ್ಟಿಯುಸಿ) ಮುಖಂಡ ಚಂದ್ರಶೇಖರನ್ ಮುಂದುವರೆದು ಮಾತನಾಡಿ, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುತ್ತಿದೆ.
ಎಚ್ಎಂಎಸ್ ಸಂಘಟನೆಯ ನಾಗನಾಥ್, ಕಾರ್ಮಿಕ ಮುಖಂಡರಾದ ರಾಜೇಂದ್ರ ನಾಯಕ್, ಸೇವಾ ಸಂಘಟನೆ ರಾಷ್ಟ್ರೀಯ ಕಾರ್ಯದರ್ಶಿ ಸೂರ್ಯ ಜಾರ್ಜ್ ಮಾತನಾಡಿದರು.

Join Whatsapp
Exit mobile version