‘ಸರ್ಕಾರ ನಡೆಯುತ್ತಿಲ್ಲ , ಮ್ಯಾನೇಜ್ ಮಾಡ್ತಿದ್ದೀವಿ’ ಆಡಿಯೋ ವೈರಲ್ ; ಸ್ಪಷ್ಟೀಕರಣ ನೀಡಿದ ಸಚಿವ ಜೆ.ಸಿ.ಮಾಧುಸ್ವಾಮಿ

Prasthutha|

ತುಮಕೂರು: ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ. ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೆ ಎನ್ನಲಾದ ವೈರಲ್ ಆಡಿಯೋ ಕುರಿತು  ನಾನು ಹಾಗೆ ಹೇಳಿರಬಹುದು, ಆದರೆ ಯಾರ ಜೊತೆ ಯಾವಾಗ ಹೇಳಿದ್ದೇನೆ ಎಂಬುದು ನನಗೆ ಗೊತ್ತಿಲ್ಲ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಖಚಿತಪಡಿಸಿದ್ದಾರೆ.

- Advertisement -

ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ. ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೆ. ಚುನಾವಣೆ ಬರೋವರೆಗೂ ತಳ್ತಾ ಇದ್ದೀವಿ ಎಂದು ರೈತರ ಸಮಸ್ಯೆಗೆ ಪರಿಹಾರ ಕೇಳಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬರಿಗೆ ಸಚಿವ ಮಾಧುಸ್ವಾಮಿ ಹೇಳಿದ್ದಾರೆ ಎನ್ನಲಾದ ಆಡಿಯೋ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಆ ಸಮಯದಲ್ಲಿ ಹಲವು ಸಚಿವರು ಮಾಧುಸ್ವಾಮಿ ವಿರುದ್ಧ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದರು.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ, ಎಲ್ಲಾ ಅಶಕ್ತರು, ಯಾರೂ ಕೆಲಸ ಮಾಡುತ್ತಿಲ್ಲ ಅಂತ ಹೇಳಿಲ್ಲ. ಡಿಸಿಸಿ ಬ್ಯಾಂಕ್ ನಲ್ಲಿ ಹೆಚ್ಚುವರಿಯಾಗಿ ಬಡ್ಡಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದು ನಿಜ. ಕರೆ ಮಾಡಿದ ವ್ಯಕ್ತಿ ಜತೆ ಮುಂದಕ್ಕೆ ಮಾತನಾಡುವ ಸಮಯದಲ್ಲಿ ಏನೋ ಹೇಳಿರಬಹುದು ಎಂದು ಸ್ಪಷ್ಟೀಕರಣ ನೀಡಿದರು.

- Advertisement -

ಸರ್ಕಾರದಲ್ಲಿ ಇದ್ದುಕೊಂಡು  ಮೂರನೇ ವ್ಯಕ್ತಿ ಜತೆ ಸರ್ಕಾರ ನಡಿತಿಲ್ಲ ಎಂದು ಹೇಳಲು ಆಗುತ್ತದೆಯೆ ? ಯಾವಾಗ ಮಾತನಾಡಿದ್ದು  ಎಂದು ನೆನಪಿಲ್ಲ. ಆದರೆ ಈಗ ಏಕೆ ಆಡಿಯೊ ವೈರಲ್ ಆಗಿದೆ ಎಂಬುದು ಗೊತ್ತಿಲ್ಲ ಎಂದರು.

‘ನಾನು ನನ್ನ ಸಹೋದ್ಯೋಗಿಗಳು ಕೇಳುತ್ತಾರೆ ಎಂದು ರಾಜೀನಾಮೆ ಕೊಡಬೇಕಾಗಿಲ್ಲ. ಮುಖ್ಯಮಂತ್ರಿ ಕೇಳಿದರೆ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಮಾತನಾಡಿದ್ದು, ಯಾವ ಸಮಯ, ಸಂದರ್ಭದಲ್ಲಿ ಮಾತನಾಡಿದ್ದೇನೆ ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದೇನೆ’ ಎಂದು ತಿಳಿಸಿದರು.

ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಆಡಿಯೋ ವೈರಲ್ ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಈ ಹೇಳಿಕೆ ಬಗ್ಗೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದಿದ್ದಾರೆ.



Join Whatsapp