ನವದೆಹಲಿ: ಆಂಡ್ರಾಯ್ಡ್ ಫೋನ್, ಐಒಎಸ್ ಫೋನ್, ಲ್ಯಾಪ್ಟಾಪ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ಏಕರೂಪದ ಚಾರ್ಜರ್ ಅಳವಡಿಸಿಕೊಳ್ಳುವ ಕ್ರಮಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಸ್ಮಾರ್ಟ್ ಫೋನ್ ಕಂಪನಿಗಳು ಮತ್ತು ಉದ್ಯಮ ಸಂಸ್ಥೆಗಳು ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಏಕರೂಪದ ಚಾರ್ಜಿಂಗ್ ಪೋರ್ಟ್ ಅನ್ನು ಹಂತ ಹಂತವಾಗಿ ಪ್ರಾರಂಭಿಸಲು ಒಪ್ಪಿಕೊಂಡಿವೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿವೆ.
ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಂತರ್ ಸಚಿವಾಲಯದ ಕಾರ್ಯಪಡೆಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೇಶದಲ್ಲಿ ಹಲವು ದಿನಗಳಿಂದ ಚರ್ಚೆಯಲ್ಲಿದ್ದ ಏಕರೂಪದ ಚಾರ್ಜರ್ ಬಳಕೆ ನಿಯಮಕ್ಕೆ ಒಪ್ಪಿಗೆ ಸಿಕ್ಕಿದೆ. ಉದ್ಯಮದ ಮಧ್ಯಸ್ಥಗಾರರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಮುಂದೆ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಸ್ಮಾರ್ಟ್ ಡಿವೈಸ್ ಗಳಿಗೆ ಒಂದೇ ಮಾದರಿಯ ಚಾರ್ಜಿಂಗ್ ಪೋರ್ಟ್ ಇರಲಿದೆ ಎಂದು ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಹಲವು ತಿಂಗಳಿನಿಂದ ದೇಶದಲ್ಲಿ ಏಕರೂಪದ ಚಾರ್ಜರ್ ಬಳಕೆ ನಿಯಮ ಚರ್ಚೆಯಲ್ಲಿತ್ತು.
ಯುರೋಪ್’ನಲ್ಲಿಯೂ ಶೀಘ್ರವೇ ಎಲ್ಲಾ ಗ್ಯಾಜೆಟ್ ಗಳು, ಯು.ಎಸ್.ಬಿ. –ಸಿ ಟೈಪ್ ಚಾರ್ಜರ್ ಹೊಂದಿರಬೇಕು ಎಂಬ ನಿಯಮ ಜಾರಿಯಾಗಲಿದೆ. ಆಪಲ್ ಕಂಪನಿ ಕೂಡ ಇದಕ್ಕೆ ಸಮ್ಮತಿಸಿದೆ. ಸ್ಮಾರ್ಟ್ ಫೋನ್’ಗಳು, ಕ್ಯಾಮೆರಾಗಳು, ಸ್ಮಾರ್ಟ್ ವಾಚ್’ಗಳು, ಟ್ಯಾಬ್’ಗಳು, ಹೆಡ್ ಫೋನ್’ಗಳು, ಪೋರ್ಟೇಬಲ್ ಸ್ಪೀಕರ್, ಗೇಮ್ ಸಾಧನಗಳು ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೂ ಒಂದೇ ಚಾರ್ಜರ್ ಬಳಸಲಾಗುವುದು ಎಂದು ಹೇಳಲಾಗಿದೆ.