ವಿದೇಶಕ್ಕೆ ತೆರಳುವವರಿಗೆ 28 ದಿನಕ್ಕೆ ಎರಡನೇ ಡೋಸ್ ನೀಡಲು ಆದೇಶ
Prasthutha: June 16, 2021

ವಿವಿಧ ಕಾರಣಗಳಿಗಾಗಿ ವಿದೇಶಕ್ಕೆ ತೆರಳುವವರಿಗಾಗಿ ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ನೀಡಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.ಸದ್ಯ ಕೋವಿಶೀಲ್ಡ್ ಕೊರೊನಾ ಲಸಿಕೆ ಮೊದಲ ಡೋಸ್ ಪಡೆದವರು 84 ದಿನಗಳ ನಂತರ ಎರಡನೇ ಡೋಸ್ ಪಡೆಯಬೇಕೆಂಬ ನಿಯಮವಿದೆ.ಆದರೆ ಈ ನಿಯಮದಿಂದ ವಿದೇಶಕ್ಕೆ ತೆರಳುವವರಿಗೆ ತೊಂದರೆಯಾಗಿತ್ತು. ಹೀಗಾಗಿ ಈ ಆದೇಶದ ಬಳಿಕ ಮೊದಲ ಡೋಸ್ ಪಡೆದ 28 ದಿನಗಳಲ್ಲಿ ಎರಡನೇ ಡೋಸ್ ಪಡೆಯಬಹುದಾಗಿದೆ.
ಸ್ವಯಂ ಘೋಷಣಾ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಯು ನೀಡುವ ಮಾಹಿತಿಯನ್ನು ಪಡೆದು, ದಾಖಲೆಗಳನ್ನು ಪರಿಶೀಲಿಸಿ, ದೃಢೀಕರಣ ಪತ್ರವನ್ನು ನೀಡಬೇಕು. ಈ ಪತ್ರವನ್ನು ಕೋವಿನ್ ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಇನ್ನು ವಿದೇಶಕ್ಕೆ ತೆರಳುವವರು ಮೊದಲ ಡೋಸ್ ಲಸಿಕೆ ಪಡೆಯುವಾಗ ನೋಂದಣಿಗಾಗಿ ಪಾಸ್ ಪೋರ್ಟ್ ನಂಬರ್ ಅಥವಾ ಇತರ ಮಾಹಿತಿ ನೀಡದಿದ್ದರೆ, ಎರಡನೇ ಡೋಸ್ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಲಸಿಕೆ ಪ್ರಮಾಣಪತ್ರವನ್ನು ಒದಗಿಸಬೇಕು ಎಂದು ಇಲಾಖೆ ತಿಳಿಸಿದೆ.
