Home ಟಾಪ್ ಸುದ್ದಿಗಳು ಗೊಟಬಯ ರಾಜೀನಾಮೆ, ವಿಕ್ರಮಸಿಂಘೆ ಮಧ್ಯಾವಧಿ ಅಧ್ಯಕ್ಷರಾಗಿ ಪ್ರಮಾಣವಚನ

ಗೊಟಬಯ ರಾಜೀನಾಮೆ, ವಿಕ್ರಮಸಿಂಘೆ ಮಧ್ಯಾವಧಿ ಅಧ್ಯಕ್ಷರಾಗಿ ಪ್ರಮಾಣವಚನ

ಕೊಲಂಬೋ: ಮಾಲ್ಡೀವ್ಸ್ ಗೆ ಪಲಾಯನ ಮಾಡಿ, ಅಲ್ಲಿಂದ ಸಿಂಗಾಪುರಕ್ಕೆ ಹೋಗಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ರಾಜೀನಾಮೆ ನೀಡಿದ ಬೆನ್ನಿಗೆ ಪ್ರಧಾನಿ ವಿಕ್ರಮಸಿಂಘೆಯವರು ಹಂಗಾಮಿ ಮಧ್ಯಾವಧಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.

ಗೊಟಬಯ ಅವರು ಸಭಾಪತಿ ಮಹಿಂದ ಯಾಪಾ ಅಬೆಯವರ್ಧನರಿಗೆ ಈಮೇಲ್ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ. ಸಭಾಪತಿ ಸೂಚನೆ ಮೇರೆಗೆ ಜು. 15ರಂದು ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 2019ರಲ್ಲಿ ಭಾರೀ ಬಹುಮತದಿಂದ ಗೆದ್ದು ಗೊಟಬಯ ಅಧಿಕಾರಕ್ಕೆ ಬಂದಿದ್ದರು. ಆದರೆ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದ ಜನರು ಇಂದು ಗೊಟಬಯರನ್ನು ದ್ವೇಷಿಸುತ್ತಾರೆ. ಪ್ರತಿಭಟನೆ ಕಂಡು ಗೊಟಬಯ ದೇಶವನ್ನೇ ಬಿಟ್ಟಿದ್ದಾರೆ.

ಗೊಟಬಯರು ನಮ್ಮಿಂದ ಆಶ್ರಯ ಕೋರಿಲ್ಲ. ಪ್ರವಾಸಿ ವೀಸಾದಲ್ಲಿ ಬಂದಿದ್ದಾರೆ. ನಾವು ಅವರಿಗೆ ಆಶ್ರಯ ಕೊಡುವ ಪ್ರಶ್ನೆಯೂ ಇಲ್ಲ ಎಂದು ಸಿಂಗಾಪುರದ ವಿದೇಶಾಂಗ ಸಚಿವಾಲಯವು ತಿಳಿಸಿದೆ. ಮೊದಲೇ ಹೇಳಿದಂತೆ ಶುಕ್ರವಾರ ಸಂಸತ್ತು ಆರಂಭವಾಗಲಿಲ್ಲ. ಅಧ್ಯಕ್ಷರ ರಾಜೀನಾಮೆ ಮತ್ತು ಹಂಗಾಮಿ ಅಧ್ಯಕ್ಷರ ನೇಮಕಾತಿ ಕಾರಣಕ್ಕೆ ಇಂದು ಸಾಧ್ಯವಾಗಿಲ್ಲ ಎಂದು ಸ್ಪೀಕರ್ ಅಬೆಯವರ್ಧನೆ ಹೇಳಿದ್ದಾರೆ.

“ದೇಶದಲ್ಲಿ ಸದ್ಯ ಕಾನೂನು ಸುವ್ಯವಸ್ಥೆ ಕಾಪಾಡುವುದು ಮುಖ್ಯ. ಸಂವಿಧಾನ ರೀತ್ಯಾ ಎಲ್ಲವನ್ನೂ ಸರಿಪಡಿಸಲಾಗುವುದು” ಎಂದು ಹಂಗಾಮಿ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದ ರಾನಿಲ್ ವಿಕ್ರಮಸಿಂಘೆ ಹೇಳಿದರು. ಬಿಕ್ಕಟ್ಟಿನಲ್ಲಿರುವ ದೇಶದಲ್ಲಿ ಸರ್ವ ಪಕ್ಷಗಳ ಸರಕಾರ ರಚಿಸುವ ಮೂಲಕ ಪರಿಹಾರದತ್ತ ಹೆಜ್ಜೆ ಇಡುವ ಪ್ರಯತ್ನ ಕೂಡಲೆ ಆರಂಭಿಸಲಾಗುವುದು ಎಂದೂ ಅವರು ಹೇಳಿದರು.

ಐಎಂಎಫ್ -ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು ಮೊದಲು ದೇಶದಲ್ಲಿ ಬಿಕ್ಕಟ್ಟು ದೂರವಾಗಬೇಕು. ನಾವು ದ್ವೀಪ ರಾಷ್ಟ್ರವನ್ನು ಮತ್ತೆ ಮೇಲೆತ್ತಲು ನೆರವು ನೀಡುವುದಾಗಿ ತಿಳಿಸಿದೆ. ಐಎಂಎಫ್ ನ ಸಂಪರ್ಕ ವಿಭಾಗದ ನಿರ್ದೇಶಕರಾದ ಗೆರಿ ರೈಸ್ ಅವರು ದೇಶದೊಳಗೆ ನಂಬಿಕೆ ಮೂಡುವ ಪ್ರಯತ್ನವನ್ನು ಮಾಡಿದ್ದಾದರೆ, ಹೊರಗಿನಿಂದ ನಂಬಿಕೆಯ ನೆರವು ಹರಿದು ಬರುವುದು ಕಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲಿ ಉಂಟಾಗಿರುವ ಊಹಾತೀತವಾದ ಪರಿಸ್ಥಿತಿಯನ್ನು ಸರಿಪಡಿಸಲು ಸಮಗ್ರ, ಸರ್ವರ ಪ್ರಯತ್ನ ಬೇಕಾಗಿದೆ. ಐಎಂಎಫ್ ಮುಂದೆ ಬರುತ್ತದೆ. ಅಂತಾರಾಷ್ಟ್ರೀಯ ಸಮುದಾಯಗಳೂ ಆಗ ಕೈ ಜೋಡಿಸುವುದು ಕಷ್ಟವಾಗುವುದಿಲ್ಲ ಎಂದೂ ರೈಸ್ ಹೇಳಿದರು. ಸುಸ್ಥಿರತೆಯತ್ತ ಶ್ರೀಲಂಕಾ ಹೆಜ್ಜೆ ಹಾಕಲು ಅಗತ್ಯದ ಸುಸ್ಥಿರ ಸಾಲ ಮತ್ತು ನೆರವು ಯೋಜನೆಯನ್ನು ಐಎಂಎಫ್ ಮಾಡಲಿದೆ ಎಂದೂ ಅವರು ತಿಳಿಸಿದರು.

Join Whatsapp
Exit mobile version