ವಾರಾಣಸಿ : ಪ್ರಧಾನಿ ನರೇಂದ್ರ ಮೋದಿಯವರನ್ನು ಅವಮಾನಿಸಿದ್ದೆನ್ನಲಾದ ವೀಡಿಯೊವೊಂದಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು ಗೂಗಲ್ ಸಿಇಒ ಸುಂದರ್ ಪಿಚೈ ವಿರುದ್ಧ ಪ್ರಕರಣ ದಾಖಲಿಸಿ, ಬಳಿಕ ಕೈಬಿಟ್ಟಿದ್ದಾರೆ. ಸುಂದರ್ ಪಿಚೈ ಸಹಿತ 17 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.
ಪ್ರಕಣದಲ್ಲಿ ತಮ್ಮ ಪಾಲು ಇಲ್ಲ ಎಂಬುದನ್ನು ಅರಿತು ಸುಂದರ್ ಪಿಚೈ ಮತ್ತು ಗೂಗಲ್ ಗೆ ಸೇರಿದ ಮೂವರು ಅಧಿಕಾರಿಗಳ ಹೆಸರನ್ನು ಎಫ್ ಐಆರ್ ನಿಂದ ಕೈಬಿಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.
ತನಗೆ ವಾಟ್ಸಪ್ ಗ್ರೂಪ್ ನಲ್ಲಿ ಬಂದ ಯೂಟ್ಯೂಬ್ ವೀಡಿಯೊವೊಂದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದುದಕ್ಕೆ 8,500ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿವೆ ಎಂದು ಆಪಾದಿಸಿ ಸ್ಥಳೀಯ ನಿವಾಸಿಯೊಬ್ಬರು ದೂರು ದಾಖಲಿಸಿದ್ದರು. ಉತ್ತರ ಪ್ರದೇಶದ ಭೇಲುಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಗೂಗಲ್ ಇಂಡಿಯಾ ಅಧಿಕಾರಿಗಳು ಸೇರಿದಂತೆ, ಸುಂದರ್ ಪಿಚೈ ವಿರುದ್ಧವೂ ಎಫ್ ಐಆರ್ ದಾಖಲಾಗಿತ್ತು.
ಈ ವೀಡಿಯೊ ಮಾಡಿರುವ ಗಾಝಿಪುರ ಮೂಲದ ಸಂಗೀತ ನಿರ್ದೇಶಕರು, ರೆಕಾರ್ಡಿಂಗ್ ಸ್ಟುಡಿಯೊ ಮತ್ತು ಸ್ಥಳೀಯ ಸಂಗೀತ ಕಂಪೆನಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.