November 14, 2020
ಇನ್ನು ನಿಮ್ಮ ಗೂಗಲ್ ಫೋಟೊ ಬ್ಯಾಕ್ ಅಪ್ ಉಚಿತವಲ್ಲ | ಹೆಚ್ಚುವರಿ ಫೋಟೊ, ವೀಡಿಯೊ ಸೇವ್ ಮಾಡಿಕೊಳ್ಳಲು ಮಾಸಿಕ, ವಾರ್ಷಿಕ ಶುಲ್ಕ ಪಾವತಿಸಬೇಕು

ಗೂಗಲ್ ನಲ್ಲಿ ನಿಮ್ಮ ಫೋಟೊ, ವೀಡಿಯೊಗಳನ್ನು ಎಷ್ಟು ಬೇಕಾದರೂ ಸೇವ್ ಮಾಡಿಕೊಂಡಿರಬಹುದಾದ ಅವಕಾಶವೊಂದಿತ್ತು. ಸಾಕಷ್ಟು ಮಂದಿ ತಮ್ಮ ಜೀವನದ ಸವಿ ನೆನಪುಗಳನ್ನು ಒಳಗೊಂಡ ಫೋಟೊ ವೀಡಿಯೊಗಳು ಇತರ ಯಾವುದೇ ಮೂಲದಲ್ಲಿರಿಸಿದರೂ ಹಾಳಾಗುತ್ತದೆ ಎಂಬ ಕಾರಣಕ್ಕಾಗಿ, ತಮ್ಮ ಜಿ-ಮೇಲ್ ಅಕೌಂಟ್ ನಲ್ಲಿರುವ ಗೂಗಲ್ ಫೋಟೊ ಬ್ಯಾಕ್ ಅಪ್ ನಲ್ಲಿ ಅಪ್ ಲೋಡ್ ಮಾಡಿ ಉಳಿಸಿಕೊಳ್ಳುತ್ತಿದ್ದರು.
ಆದರೆ, ಈಗ ಗೂಗಲ್ 2021ರ ಜೂನ್ ಬಳಿಕ ಈ ಉಚಿತ ಅವಕಾಶವನ್ನು ಕೊನೆಗೊಳಿಸಲಿದೆ. ಆದರೆ, ಮಾಸಿಕ ಅಥವಾ ವಾರ್ಷಿಕ ಪಾವತಿ ಯೋಜನೆಯ ಮೂಲಕ ನಿಮ್ಮ ಫೋಟೊಗಳನ್ನು ಸೇವ್ ಮಾಡಿ ಉಳಿಸಿಕೊಳ್ಳಬಹುದಾಗಿದೆ.
ಇಲ್ಲಿ ಒಂದು ಅವಕಾಶವಿದೆ. 15 ಜಿಬಿ ವರೆಗಿನ ದಾಖಲೆಗಳನ್ನು ಇದರಲ್ಲಿ ಸೇವ್ ಮಾಡಿಡಬಹುದು. ಆದರೆ, 15 ಜಿಬಿ ಸ್ಟೋರೇಜ್ ಸ್ಪೇಸ್ ದಾಟಿದರೆ, ಅದಕ್ಕೆ ಹಣ ಪಾವತಿಸಿ ಜಾಗವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ.
ಈವರೆಗೆ ನೀವು ನಿಮ್ಮ ಜಿ-ಮೇಲ್ ಖಾತೆಯ ಗೂಗಲ್ ಫೊಟೊಸ್ ಬ್ಯಾಕ್ ಅಪ್ ನಲ್ಲಿ ಉಳಿಸಿಕೊಂಡಿರುವ ದಾಖಲೆಗಳಿಗೆ ಏನೂ ತೊಂದರೆಯಿಲ್ಲ. ಆದರೆ 2021ರ ಜೂನ್ ಬಳಿಕದ ಸ್ಟೋರೇಜ್ ಗಳಿಗೆ ಹೊಸ ನಿಯಮ ಅನ್ವಯವಾಗುತ್ತದೆ.
ಹೆಚ್ಚುವರಿ ಸ್ಪೇಸ್ ಬೇಕಾದವರು 100 ಜಿಬಿಗೆ ಮಾಸಿಕ 130 ಮತ್ತು ವಾರ್ಷಿಕ 1,300 ರೂ. ಪಾವತಿಸಬೇಕು. 200 ಜಿಬಿ ಬೇಕಾದವರು ವರ್ಷಕ್ಕೆ 2,100 ಮತ್ತು 2ಟಿಬಿ ಬೇಕಾದವರು ವರ್ಷಕ್ಕೆ 6,500 ರೂ. ಪಾವತಿಸಬೇಕು.