Home ಮಾಹಿತಿ ಕಾರು, ಜೀಪು ಲೈಸೆನ್ಸ್‌ ಇದ್ದರೆ ಸರಕು ವಾಹನ ಓಡಿಸಬಹುದು: ಸುಪ್ರೀಂ ಕೋರ್ಟ್‌

ಕಾರು, ಜೀಪು ಲೈಸೆನ್ಸ್‌ ಇದ್ದರೆ ಸರಕು ವಾಹನ ಓಡಿಸಬಹುದು: ಸುಪ್ರೀಂ ಕೋರ್ಟ್‌

ನವದೆಹಲಿ: ಕಾರು, ಜೀಪು ಮೊದಲಾದ ಲಘು ಮೋಟಾರು ವಾಹನ (ಎಲ್‌ಎಂವಿ) ಚಾಲನೆಗೆ ಪರವಾನಗಿ ಹೊಂದಿರುವವರು, 7500 ಕೆಜಿ ತೂಕದವರೆಗಿನ ಸರಕು ಸಾಗಣೆ ವಾಹನಗಳನ್ನು ಯಾವುದೇ ಹೊಸ ಅನುಮತಿ ಇಲ್ಲದೆಯೇ ಚಲಾಯಿಸಬಹುದು ಎಂದು ಸುಪ್ರೀಂಕೋರ್ಟ್‌ ನ ಪಂಚ ಸದಸ್ಯರ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.

ಹೀಗಾಗಿ ಎಲ್‌ಎಂವಿ ಲೈಸೆನ್ಸ್‌ ಹೊಂದಿದ್ದವರು, ಸರಕು ಸಾಗಣೆ ವಾಹನ ಚಾಲನೆ ಮಾಡಿದ ವೇಳೆ ಸಂಭವಿಸುವ ಅಪಘಾತಗಳಿಗೆ ವಿಮಾ ಕಂಪನಿಗಳು ಪರಿಹಾರ ನಿರಾಕರಿಸುವ ಪ್ರಕರಣಗಳಿಗೆ ತೆರೆ ಬೀಳಲಿದೆ.

ಎಲ್‌ಎಂವಿ ಲೈಸೆನ್ಸ್‌ ಹೊಂದಿರುವ ವ್ಯಕ್ತಿಗಳು 7500 ಕೆಜಿ ತೂಕದವರೆಗಿನ ಸರಕು ಸಾಗಣೆ ವಾಹನ ಚಲಾಯಿಸಲು ಯಾವುದೇ ಹೆಚ್ಚುವರಿ ಅನುಮತಿ ಲೈಸೆನ್ಸ್ ಪಡೆಯಬೇಕಾದ್ದಿಲ್ಲ. ಎಲ್‌ಎಂವಿ ಮತ್ತು ಸರಕು ಸಾಗಣೆ ವಾಹನಗಳು ಸಂಪೂರ್ಣ ಪ್ರತ್ಯೇಕ ವರ್ಗಕ್ಕೆ ಸೇರಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ಪೀಠ ಹೇಳಿತು.

ಆದರೆ ಅಪಾಯಕಾರಿ ವಸ್ತುಗಳನ್ನು ಸಾಗಣೆ ಮಾಡುವ ಇದೇ ತೂಕದ ಮಿತಿಯ ವಾಹನ ಚಾಲನೆ ಮಾಡುವವರು ಪ್ರತ್ಯೇಕ ಅನುಮತಿ ಪಡೆಯುವುದು ಅಗತ್ಯ ಎಂದು ಸ್ಪಷ್ಟಪಡಿಸಿತು.

ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಕ್ಕೆ 1.7 ಲಕ್ಷ ಜನರು ಸಾವನ್ನಪುತ್ತಿದ್ದಾರೆ.

Join Whatsapp
Exit mobile version