ನವದೆಹಲಿ: ಕರ್ನಾಟಕದ ಜನ ಸದಾ ಸಾಮಾಜಿಕ ನ್ಯಾಯ, ಮಹನೀಯರ ಏಕತೆ ಹಾಗೂ ಮಾನವತಾವಾದದ ತತ್ವಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್, ಬುದ್ಧ-ಬಸವಣ್ಣ, ನಾರಾಯಣ ಗುರು, ಕುವೆಂಪು ಮುಂತಾದ ಅನೇಕ ಮಹನೀಯರ ಜೀವನಕ್ಕೆ ಹಾಗೂ ಕರ್ನಾಟಕದ ಅಸ್ಮಿತೆಗೆ ವಿರುದ್ದವಾದ ಸಂದೇಶಗಳನ್ನು ಪಠ್ಯ ಪುಸ್ತಕದ ಮೂಲಕ ಮಕ್ಕಳಿಗೆ ಕಲಿಸಲು ಬಿಜೆಪಿ ಹೊರಟಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ಒಂದು ಕೋಟಿ ಮಕ್ಕಳ ಭವಿಷ್ಯದ ನಿರ್ಧಾರವನ್ನ ಅರ್ಹತೆಯಿಲ್ಲದ ಕೈಗಳಿಗೆ ವಹಿಸಲಾಗಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕತೆ ಮತ್ತು ಲಿಂಗ ಸಮಾನತೆ ಸಾರುವ ಪಾಠಗಳನ್ನು, ಲೇಖಕರನ್ನು ಹೊರಗಿಟ್ಟು ಮಕ್ಕಳಿಗೆ ಕೇಸರೀಕರಣದ ಪಾಠ ಹೇಳಲು ಹೊರಟಿರುವುದು ವೈವಿಧ್ಯತೆಯ ತೊಟ್ಟಿಲಾದ ಭಾರತಕ್ಕೆ ಮಾಡುವ ಅಪಮಾನ ಎಂದು ಅವರು ಕಿಡಿಕಾರಿದ್ದಾರೆ.
ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಎಲ್ಲರೂ ಒಂದಾಗಿ ಅದನ್ನ ಮೆಟ್ಟಿನಿಲ್ಲುತ್ತಾರೆ ಎನ್ನುವುದನ್ನು ಕನ್ನಡಿಗರು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ಬಹುತ್ವಕ್ಕೆ ಮಾರಕವಾದ ಪಠ್ಯವನ್ನ ಮಕ್ಕಳ ಮೇಲೆ ಹೇರಲು ಕಾಂಗ್ರೆಸ್ ಬಿಡುವುದಿಲ್ಲ.ಕನ್ನಡದ ನಾಡು, ನುಡಿ ಮತ್ತು ಸಾಹಿತಿಗಳ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಸದಾ ಬದ್ಧವಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.