ಅಹ್ಮದಾಬಾದ್: ಗುಜರಾತ್ ಚುನಾವಣೆಗೂ ಮೊದಲೇ ಪ್ರಧಾನಿ ಕಚೇರಿಯಲ್ಲಿನ ಗೋಡ್ಸೆ ಭಕ್ತರು ನನ್ನ ಬಂಧನಕ್ಕೆ ಸಂಚು ರೂಪಿಸಿದ್ದರು ಎಂದು ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡ ಗುಜರಾತ್ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದ್ದಾರೆ.
ಗುಜರಾತಿನ ಬನಸ್ಕಾಂತ ಜಿಲ್ಲೆಯಲ್ಲಿ ಏಪ್ರಿಲ್ 20ರಂದು ಶಾಸಕ ಜಿಗ್ನೇಶ್ ಮೇವಾನಿಯವರನ್ನು ಬಂಧಿಸಲಾಗಿತ್ತು.
ಅಸ್ಸಾಮ್ ನ ಸೆರೆಮನೆಯಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಅವರು ಸೋಮವಾರ, ಪ್ರಧಾನಿ ಮೋದಿಯವರ ಕಚೇರಿ ಮೇಲೆ ಕೆಂಡ ಕಾರಿದರು. ಅಲ್ಲಿನ ಮೋದಿ ಭಕ್ತರು ನನ್ನ ಬಂಧನದ ರೂಪುರೇಖೆ ಹಾಕಿದವರು ಎಂದು ಮೇವಾನಿ ಗಂಭೀರ ಆರೋಪ ಮಾಡಿದರು.
ನವದೆಹಲಿಯ ಕಾಂಗ್ರೆಸ್ ಕಚೇರಿಗೆ ಸೋಮವಾರ ಬಂದು ಮಾತನಾಡಿದ ಅವರು, ಪ್ರಧಾನಿ ಕಚೇರಿಯಲ್ಲಿ ಮೋದಿ ಭಕ್ತರು ಇಂಥ ಕೆಲಸವನ್ನೇ ಮಾಡುತ್ತಿರುತ್ತಾರೆ. “ಗುಂಡಿಡು ಹೂವಾಗಿರಬೇಡ” ಎಂಬ ಪುಷ್ಪ ಚಿತ್ರದ ಮಾತು ಹೇಳಿದ ಮೇವಾನಿ, ಸರಕಾರವು ನಮ್ಮ ಮೊಬೈಲ್ , ಕಂಪ್ಯೂಟರ್ ಸಹಿತ ಎಲೆಕ್ಟ್ರಾನಿಕ್ಸ್ ವಸ್ತುಗಳಲ್ಲೆಲ್ಲ ಏನೇನೋ ಸೇರಿಸುತ್ತಿದೆ. ನನ್ನ ಹಾಗೂ ನನ್ನವರ ಮೊಬೈಲ್ ಕಸಿದಿಟ್ಟುಕೊಂಡಿದ್ದಾರೆ. ಇನ್ನು ಅದರೊಳಗೇನು ಮಾಡುವರೋ ನೋಡಬೇಕು ಎಂದವರು ಹೇಳಿದರು.
ಗುಜರಾತಿನಲ್ಲಿ ಪ್ರಶ್ನೆಪತ್ರಿಕೆ ಬಹಿರಂಗವಾದ 22 ಘಟನೆಗಳು ನಡೆದವು; ಆದರೆ ಯಾವುದರಲ್ಲೂ ಪ್ರಕರಣ ದಾಖಲಾಗಿಲ್ಲ. ಯಾವುದೇ ತನಿಖೆ ನಡೆದಿಲ್ಲ. ಮಾದಕ ದ್ರವ್ಯಗಳು ಲಾರಿಗಟ್ಟಲೆ ದೊರಕಿವೆ. ಮುಂದ್ರಾ ಬಂದರಿನ ಭಾರೀ ಮಾದಕ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರದೇ ಬಂಧನವಾಗಿಲ್ಲ, ಇಲ್ಲವೇ ಯಾವುದೇ ತನಿಖೆ ನಡೆದಿಲ್ಲ. ದಲಿತ ಮಹಿಳೆಯೊಬ್ಬಳ ಅತ್ಯಾಚಾರದ ಆರೋಪ ಗುಜರಾತ್ ನ ಸಚಿವನೊಬ್ಬನ ಮೇಲೇ ಇದ್ದರೂ ಏನೂ ಆಗಿಲ್ಲ. ಧರ್ಮ ಸಂಸದ್ ಒಂದರಲ್ಲಿ ಒಂದು ಜನಾಂಗವನ್ನು ನಿರ್ವಂಶ ಮಾಡುವಂತೆ ಕರೆ ನೀಡಲಾಯಿತು. ಆದರೆ ಯಾವ ರೀತಿಯ ತನಿಖೆ, ಬಂಧನ ಆಗಿಲ್ಲ ಎಂದು ಮೇವಾನಿ ಟೀಕಿಸಿದರು.
“ನನ್ನ ಟ್ವೀಟ್ ಸರಳವಾಗಿತ್ತು. ನಾನು ಪ್ರಧಾನಿಯವರಿಗೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ನಮ್ರ ಮನವಿ ಮಾಡಿದ್ದೇನೆ. ಅವರು ಅದಕ್ಕಾಗಿ ನನ್ನನ್ನು ಬಂಧಿಸಿದರು. ಇದು ಏನನ್ನು ತೋರಿಸುತ್ತದೆ? ಇದು ನನ್ನನ್ನು ನಾಶ ಮಾಡಲು ನಡೆಸಿರುವ ಯೋಜಿತ ಸಂಚು. ನನಗೆ ಎಫ್ ಐಆರ್ ಪ್ರತಿ ಕೊಟ್ಟಿಲ್ಲ. ಯಾವ ವಿಧಿಗಳಡಿ ನನ್ನನ್ನು ಹಿಡಿಯಲಾಗಿದೆ ಎಂದೂ ತಿಳಿಸಿಲ್ಲ. ನನಗೆ ನನ್ನ ವಕೀಲರ ಜೊತೆ ಮಾತನಾಡಲು ಅವಕಾಶ ನೀಡಿಲ್ಲ. ನಾನು ಶಾಸಕನಾಗಿದ್ದರೂ ಅದಕ್ಕಿರುವ ಹಕ್ಕುಗಳನ್ನೂ ನೀಡಿಲ್ಲ. ನನ್ನ ಬಂಧನದ ಬಗ್ಗೆ ಗುಜರಾತ್ ವಿಧಾನ ಸಭೆಯ ಸಭಾಧ್ಯಕ್ಷರಿಗೆ ಮಾಹಿತಿ ನೀಡಿಲ್ಲ. ನನ್ನನ್ನು ವಶಕ್ಕೆ ತೆಗೆದುಕೊಂಡು ಅಸ್ಸಾಂಗೆ ಹೋದ ಮೇಲೆ ಸ್ಪೀಕರ್ ಗೆ ಮಾಹಿತಿ ಕಳುಹಿಸಿದ್ದಾರೆ. ಇದು ಗುಜರಾತಿನ ಹಿರಿಮೆಗೆ ಬಳಿದ ಮಸಿ. ಗುಜರಾತ್ ಸರಕಾರಕ್ಕೂ ನಾಚಿಕೆ ಆಗಬೇಕಾದ ವಿಷಯ” ಎಂದು ಮೇವಾನಿ ಕಿಡಿ ಕಾರಿದರು.
ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಜಿಗ್ನೇಶ್ ಮೇವಾನಿಯವರು ಕಳೆದ ಸೆಪ್ಟಂಬರ್ ನಿಂದ ಕಾಂಗ್ರೆಸ್ಸಿಗೆ ತನ್ನ ಬೆಂಬಲ ಘೋಷಿಸಿದ್ದಾರೆ. ಅವರನ್ನು ಸ್ಥಳೀಯ ಪೊಲೀಸರ ನೆರವಿನಿಂದ ಅಸ್ಸಾಂ ಪೊಲೀಸರು ಗುಜರಾತಿನ ಬನಸ್ಕಾಂತ ಜಿಲ್ಲೆಯಲ್ಲಿ ಬಂಧಿಸಿದ್ದರು. ಪ್ರಧಾನಿ ಮೋದಿಯವರಿಗೆ ಸಲಹೆಯ ಟ್ವೀಟ್ ಮಾಡಿದ್ದಾರೆ ಎಂದು ಅಸ್ಸಾಂ ಕೋಕ್ರಜಾರ್ ಜಿಲ್ಲೆಯ ಬಿಜೆಪಿ ನಾಯಕ ನೀಡಿದ ದೂರಿನ ಮೇಲೆ ಮೇವಾನಿಯವರನ್ನು ಬಂಧಿಸಿ 21ನೇ ತಾರೀಕಿನ ಬೆಳಿಗ್ಗೆ ವಿಮಾನದಲ್ಲಿ ಗೌಹಾತಿಗೆ ಒಯ್ಯಲಾಗಿತ್ತು.
ಕೋಕ್ರಾಜಾರ್ ಕೋರ್ಟು ಏಪ್ರಿಲ್ 25ರಂದು ಮೇವಾನಿಯವರಿಗೆ ಜಾಮೀನು ನೀಡಿತು. ನನ್ನ ಮೇಲೆ ಹಲ್ಲೆ ಮಾಡಿ ಮಹಿಳೆಯರ ಗೌರವಕ್ಕೆ ಭಂಗ ತಂದಿದ್ದಾರೆ ಎಂದು ಬಾರ್ಪೇಟ ಜಿಲ್ಲೆಯಿಂದ ಮಹಿಳಾ ಪೋಲೀಸರಿಂದ ಹೊಸ ದೂರನ್ನು ಮೇವಾನಿ ಮೇಲೆ ದಾಖಲಿಸಲಾಗಿತ್ತು.
ಗೋಡ್ಸೆ ಭಕ್ತರು ಪ್ರಧಾನಿ ಕಚೇರಿಯಲ್ಲಿ, ಅಸ್ಸಾಂನಲ್ಲಿ, ಗುಜರಾತಿನಲ್ಲಿ ಎಲ್ಲೆಡೆ ನನ್ನ ಬಂಧನಕ್ಕಾಗಿ ಸಂಚು ರೂಪಿಸಿದರು.
ಕೊನೆಗೂ ಮೊನ್ನೆ ಜಾಮೀನು ಪಡೆದು ದೆಹಲಿಗೆ ಬಂದ ಮೇವಾನಿಯವರು ಸೋಮವಾರ ಪ್ರಧಾನಿ ಮತ್ತು ಅವರ ಕಚೇರಿಯನ್ನು ಕಟುವಾಗಿ ಟೀಕಿಸಿದ್ದಾರೆ. ಗುಜರಾತಿನಲ್ಲಿ ಚುನಾವಣೆ ಬರುವುದಕ್ಕೆ ಮೊದಲು ನನ್ನ ಹೆಸರು ಕೆಡಿಸಲು ಬಿಜೆಪಿಯ ಪ್ರಧಾನಿ ಕಚೇರಿಯಿಂದಲೇ ಮೊದಲೇ ಯೋಜಿಸಿ ನಡೆದಿರುವ ಸಂಚು ಇದು ಎಂದು ಮೇವಾನಿ ಹೇಳಿದರು.