Home ಟಾಪ್ ಸುದ್ದಿಗಳು ಜ್ಞಾನವಾಪಿ ಮಸೀದಿ ಪ್ರಕರಣ: ‘ಶಿವಲಿಂಗ’ ಕ್ಕೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೋರಿ ಕೋರ್ಟ್‌ ಮೊರೆ

ಜ್ಞಾನವಾಪಿ ಮಸೀದಿ ಪ್ರಕರಣ: ‘ಶಿವಲಿಂಗ’ ಕ್ಕೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕೋರಿ ಕೋರ್ಟ್‌ ಮೊರೆ

ಲಕ್ನೋ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಐವರು ಹಿಂದೂ ಮಹಿಳಾ ಭಕ್ತರು ಸಲ್ಲಿಸಲಾದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ವಿಚಾರಣೆ ನಡೆಸಲಿದೆ. ಜ್ಞಾನವಾಪಿ ಮಸೀದಿ ಸಂಕೀರ್ಣದಿಂದ ಮುಸ್ಲಿಮರನ್ನು ನಿಷೇಧಿಸಿ ಅದನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ಅರ್ಜಿಯ ವಿಚಾರಣೆಯನ್ನು ನಿರ್ವಹಿಸಬಹುದಾಗಿದೆ ಎಂದು ಇಂದು ತ್ವರಿತ ನ್ಯಾಯಾಲಯ ನೀಡಿದ ತನ್ನ ಆದೇಶದಲ್ಲಿ ತಿಳಿಸಿದೆ.

ವಾರಣಾಸಿಯ ಮತ್ತೊಂದು ನ್ಯಾಯಾಲಯವು ಜ್ಞಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯ ಅರ್ಜಿಯನ್ನು ಈಗಾಗಲೇ ವಿಚಾರಣೆ ನಡೆಸುತ್ತಿದೆ. ಐತಿಹಾಸಿಕ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ದಶಕಗಳಷ್ಟು ಹಳೆಯ ವಿವಾದದ ಕೇಂದ್ರವಾಗಿದೆ.

ಈ ವರ್ಷದ ಆರಂಭದಲ್ಲಿ ಕೆಳ ನ್ಯಾಯಾಲಯದ ಆದೇಶದ ಮೇರೆಗೆ ದೇವಾಲಯದ ಸಂಕೀರ್ಣದಲ್ಲಿ ನಡೆಸಿದ ವೀಡಿಯೋ ಸಮೀಕ್ಷೆಯ ವೇಳೆ ಶಿವಲಿಂಗ ಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಐವರು ಹಿಂದೂ ಮಹಿಳಾ ಅರ್ಜಿದಾರರು ಶಿವಲಿಂಗದ ಕುರಿತು ವೈಜ್ಞಾನಿಕ ತನಿಖೆ ನಡೆಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಮಸೀದಿ ಸಂಕೀರ್ಣದ ಒಳಗಿನ ದರ್ಗಾದಲ್ಲಿ ವರ್ಷಪೂರ್ತಿ ಪ್ರಾರ್ಥನೆಗೆ ಅನುಮತಿ ಕೋರಿ ಹಿಂದೂ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೆ ಮಸೀದಿಯೊಳಗೆ ಹಿಂದೂ ದೇವತೆಗಳ ಪುರಾತನ ವಿಗ್ರಹಗಳು ನೆಲೆಗೊಂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ಮಧ್ಯೆ ವೈಜ್ಞಾನಿಕ ತನಿಖೆಗೆ ಮಸೀದಿ ಆಡಳಿತ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರಕರಣವು ಮಸೀದಿಯೊಳಗಿನ ದರ್ಗಾದಲ್ಲಿ ಪ್ರಾರ್ಥಿಸುವ ಬಗ್ಗೆ ಮತ್ತು ಅದರ ರಚನೆಗೆ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿತ್ತು.

“ಶಿವಲಿಂಗ” ಎಂದು ಕರೆಯಲ್ಪಡುವ ವಸ್ತುವು ವಾಸ್ತವವಾಗಿ ಅಂಗಶುದ್ಧಿ ಮಾಡುವ ನೀರಿನ “ಕಾರಂಜಿ” ಆಗಿದೆ ಎಂದು ಮಸೀದಿ ಆಡಳಿತ ಸಮಿತಿಯವರು ವಾದಿಸಿದ್ದಾರೆ.

ಹಿಂದೂ ಮಹಿಳೆಯರ ಅರ್ಜಿಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ ಎಂದು ವಾದಿಸಿದ ಮಸೀದಿ ಆಡಳಿತ ಸಮಿತಿಯ ಮನವಿಯನ್ನು ವಾರಣಾಸಿಯ ಹಿರಿಯ ನ್ಯಾಯಾಧೀಶರ ಪೀಠ ವಜಾಗೊಳಿಸಿತ್ತು.

Join Whatsapp
Exit mobile version