22 ಮಂದಿ ಪೊಲೀಸರನ್ನು ಹತ್ಯೆ ಮಾಡಲು ವೀರಪ್ಪನ್‌ಗೆ ಸಹಕರಿಸಿದ್ದ ಜ್ಞಾನಪ್ರಕಾಶ್ ನಿಧನ

Prasthutha|

ಚಾಮರಾಜನಗರ: ಕಾಡುಗಳ್ಳ, ನರಹಂತಕ ವೀರಪ್ಪನ್‌ಗೆ
ಪಾಲಾರ್ ಬಾಂಬ್ ಸ್ಫೋಟದಲ್ಲಿ 22 ಮಂದಿ ಪೊಲೀಸರನ್ನು ಹತ್ಯೆ ಮಾಡಲು ಸಹಕರಿಸಿದ ಕಾರಣ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ತಾಲೂಕಿನ ಸಂದನಪಾಳ್ಯ ಗ್ರಾಮದ ಜ್ಞಾನಪ್ರಕಾಶ್ ನಿಧನ ಹೊಂದಿದ್ದಾನೆ. ಆತನಿಗೆ 70 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ.

- Advertisement -

ವೀರಪ್ಪನ್ ಮಲೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ತೆರಳುವ ಪಾಲಾರ್ ಸೇತುವೆಗೆ 1993ರ ಏಪ್ರಿಲ್ 9ರಂದು ಬಾಂಬ್ ಸಿಡಿಸಿ 22 ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದನು. ಈ ಕೃತ್ಯಕ್ಕೆ ವೀರಪ್ಪನ್‌ಗೆ ಜ್ಞಾನಪ್ರಕಾಶ್, ಸೈಮನ್, ಮಾದಯ್ಯ, ಬಿಲವೇಂದ್ರನ್ ಸಹಕರಿಸಿದ್ದರು.

ಮೈಸೂರಿನ ಟಾಡಾ ನ್ಯಾಯಾಲಯ ಜ್ಞಾನ ಪ್ರಕಾಶ್‌ ಸಹಿತ ನಾಲ್ವರಿಗೆ 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಆರೋಪಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 2014ರಲ್ಲಿ ಸುಪ್ರೀಂ ಕೋರ್ಟ್ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು.

- Advertisement -

ಜ್ಞಾನಪ್ರಕಾಶ್ ಬೆಳಗಾವಿಯ ಹಿಂಡಲಗಾ ಮತ್ತು ಮೈಸೂರು ಜೈಲಿನಲ್ಲಿ 29 ವರ್ಷಗಳ ಶಿಕ್ಷೆ ಅನುಭವಿಸಿದ್ದನು. ಮೂರು ವರ್ಷಗಳ ಹಿಂದೆ ಕ್ಯಾನ್ಸರ್ ಕಾಯಿಲೆ ಗೆ ತುತ್ತಾಗಿದ್ದ ಆತನಿಗೆ ಸುಪ್ರೀಂ ಕೋರ್ಟ್ 2022ರ ನವೆಂಬರ್‌ನಲ್ಲಿ ಜಾಮೀನು ನೀಡಿತ್ತು. ಜೈಲಿನಿಂದ ಬಿಡುಗಡೆಯಾಗಿ ಸ್ವಗ್ರಾಮ ಸಂದನಪಾಳ್ಯದಲ್ಲಿ ವಾಸವಿದ್ದನು. ಅನಾರೋಗ್ಯದಿಂದ ಇದ್ದ ಆತ ಶುಕ್ರವಾರ ರಾತ್ರಿ ನಿಧನನಾಗಿದ್ದಾನೆ. ಶನಿವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.



Join Whatsapp