Home ಟಾಪ್ ಸುದ್ದಿಗಳು ನವೆಂಬರ್ ನಲ್ಲಿ ಜಾಗತಿಕ ಹೂಡಿಕೆ ಸಮಾವೇಶ: ಸಚಿವ ಮುರುಗೇಶ್ ನಿರಾಣಿ

ನವೆಂಬರ್ ನಲ್ಲಿ ಜಾಗತಿಕ ಹೂಡಿಕೆ ಸಮಾವೇಶ: ಸಚಿವ ಮುರುಗೇಶ್ ನಿರಾಣಿ

ಮಂಗಳೂರು: ನವೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಬಂಡವಾಳ ಹೂಡಿಕೆಯ ನಿರೀಕ್ಷೆ ಇದೆ ಎಂದು ರಾಜ್ಯ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಮಂಗಳೂರಿನ ಟಿಎಂಪೈ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ‘ಉದ್ಯಮಿ ಆಗು, ಉದ್ಯೋಗ ಕೊಡು’ ಸಮಾವೇಶದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ದೇಶದ ಶೇ.42 ರಷ್ಟು ಬಂಡವಾಳ ರಾಜ್ಯದಲ್ಲಿ ಹೂಡಲಾಗಿದೆ. ಮುಂದಿನ ದಿನಗಳಲ್ಲಿ ಕೈಗಾರಿಕಾ ವಲಯಗಳನ್ನು ಮತ್ತಷ್ಟು ವಿಸ್ತರಿಸಲಾಗುವುದು. ಇದಕ್ಕಾಗಿ ಬೆಂಗಳೂರಿನಲ್ಲಿ 30 ಸಾವಿರ ಎಕ್ರೆ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ 20 ಸಾವಿರ ಎಕ್ರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದರು.

ಈಗಾಗಲೇ ಸ್ವಾಧೀನ ಪಡಿಸಿಕೊಂಡು ನೀಡಲಾದ ಭೂಮಿಯಲ್ಲಿ ಕೈಗಾರಿಕೆ ನಡೆಸದೇ ಇರುವುದು ಕಂಡು ಬಂದರೆ, ಅಂತಹ ಭೂಮಿಯನ್ನು ಸರಕಾರ ಮರು ಸ್ವಾಧೀನ ಪಡಿಸಲಿದೆ ಎಂದು ತಿಳಿಸಿದರು‌.

ಬಿಡದಿಯಲ್ಲಿರುವ ಟೊಯೊಟಾ ಕಂಪೆನಿಯ ಕೈಗಾರಿಕೆಯು ಮತ್ತೆ 5 ಸಾವಿರ ಕೋಟಿ ರೂ. ಬಂಡವಾಳ ಹೂಡಿ ವಿಸ್ತರಣೆ ನಡೆಸಲಿದೆ. ಬ್ಯಾಟರಿ ಕಂಪೆನಿಯಾದ ಎಕ್ಸೈಡ್ 6ಸಾವಿರ ಕೋಟಿ ರೂ. ಹಾಗೂ ಬೆಳಗಾವಿಯಲ್ಲಿ 2500 ಸಾವಿರ ಕೋ.ರೂ. ಬಂಡವಾಳವನ್ನು ಗೋಲ್ಡ್ ಪ್ಲಾಸ್ಕ್ ಸಂಸ್ಥೆಯು ಹೂಡಲಿದೆ ಎಂದು ತಿಳಿಸಿದರು.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕೈಗಾರಿಕೆಗಳ ಮಾಲಿನ್ಯದಿಂದ ನಡೆಯುತ್ತಿರುವ ಅನಾಹುತಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ಕೆಲವೊಂದು ತಪ್ಪುಗಳು ಸಂಭವಿಸಿವೆ‌‌. ಆದರೆ ಇದೀಗ ಎಲ್ಲವನ್ನೂ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾನಿಟರಿಂಗ್ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.‌

ಅಲ್ಲದೇ ಪಿಪಿಪಿ ಮಾದರಿಯಲ್ಲಿ ಖಾಸಗಿ ಹಾಗೂ ಸರಕಾರ ಸೇರಿಕೊಂಡು ಬಂದರು, ರೈಲ್ವೇ ಲೈನ್ ಹಾಗೂ ಹೆದ್ದಾರಿ ಅಭಿವೃದ್ಧಿಪಡಿಸಲಾಗುವುದು ಎಂದು ನಿರಾಣಿ ತಿಳಿಸಿದರು.

Join Whatsapp
Exit mobile version