Home ಟಾಪ್ ಸುದ್ದಿಗಳು ಬಾಡಿಗೆಗಿದ್ದ ಯುವತಿಯ ಹಣೆಗೆ ಪಿಸ್ತೂಲಿಟ್ಟು ಅತ್ಯಾಚಾರ: ಆರೋಪಿ ಮನೆ ಮಾಲೀಕ ಅರೆಸ್ಟ್

ಬಾಡಿಗೆಗಿದ್ದ ಯುವತಿಯ ಹಣೆಗೆ ಪಿಸ್ತೂಲಿಟ್ಟು ಅತ್ಯಾಚಾರ: ಆರೋಪಿ ಮನೆ ಮಾಲೀಕ ಅರೆಸ್ಟ್

ಬೆಂಗಳೂರು: ಮನೆ ಬಾಡಿಗೆಗಿದ್ದ ಯುವತಿಯ ಹಣೆಗೆ ಪಿಸ್ತೂಲಿಟ್ಟು ಬೆದರಿಸಿ ಅತ್ಯಾಚಾರ ಎಸಗಿದ ಮಾಲೀಕನನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಟೇಲ್ಸ್ ವ್ಯಾಪಾರಿ ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ ಆರೋಪಿ. ಆತನನ್ನು ಕೋರ್ಟ್ ಗೆ ಹಾಜರು ಪಡಿಸಿ ಮೂರು ದಿನಗಳ ಕಾಲ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ (ಪ್ರಭಾರ) ಡಾ.ಎಸ್ .ಡಿ.ಶರಣಪ್ಪ ತಿಳಿಸಿದ್ದಾರೆ.

ಆರೋಪಿಯು ಟೈಲ್ಸ್ ವ್ಯಾಪಾರ ಮಾಡಿಕೊಂಡು ನಗರದಲ್ಲಿ ವಾಸಿಸುತ್ತಿದ್ದು ಆತ ಖರೀದಿಸಿದ ಆಶೋಕನಗರದ ಮನೆಯಲ್ಲಿ ಪಶ್ಚಿಮ ಬಂಗಾಳದ ಯುವತಿ ಕಳೆದ ಮಾರ್ಚ್ನಿಂದ ಬಾಡಿಗೆಗೆ ವಾಸಿಸುತ್ತಿದ್ದಳು. ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಯುವತಿಯೊಂದಿಗೆ ಮನೆಗೆ ಆಗಾಗ ಸ್ನೇಹಿತರು ಬರುತ್ತಿರುವ ಬಗ್ಗೆ ಮನೆ ಮಾಲೀಕ ತಗಾದೆ ತೆಗೆಯುತ್ತಿದ್ದು, ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.


ಕೆಲವು ದಿನಗಳ ಬಳಿಕ ಯುವತಿಯು ಇರುವ ಮನೆಯಲ್ಲಿ ಆಕೆಯ ಸ್ನೇಹಿತನೊಬ್ಬ ಉಳಿದುಕೊಂಡಿರುವುದನ್ನು ಗಮನಿಸಿದ ಆರೋಪಿ ಮಾಲೀಕ ಮನೆಯ ಹೊರಗೆ ನಿಲ್ಲಿಸಿದ್ದ ಸ್ನೇಹಿತನ ಬೈಕ್ ಅನ್ನು ಲಾಕ್ ಮಾಡಿದ್ದಾನೆ. ಮರುದಿನ ಬೆಳಗ್ಗೆ ಪೊಲೀಸರು ಬಂದು ಬೈಕ್ ಗೆ ಲಾಕ್ ಮಾಡಿದ್ದಾರೆ. ಮನೆ ಬಾಡಿಗೆಗೆ ಕೊಟ್ಟರೆ ಇಲ್ಲಸಲ್ಲದ ಚಟುವಟಿಕೆ ನಡೆಸುವಿರಾ? ಪೊಲೀಸರು ಬಂದರೆ ನಿಮ್ಮ ಮೇಲೆ ಕೇಸ್ ದಾಖಲಿಸುತ್ತಾರೆ ಎಂದು ಯುವಕನಿಗೆ ಭಯ ಹುಟ್ಟಿಸಿದ್ದಾನೆ. ನಂತರ ತಾನು ಪೊಲೀಸರೊಂದಿಗೆ ಕೇಸ್ ದಾಖಲಿಸದಂತೆ ಮಾತನಾಡಿರುವುದಾಗಿ ಹೇಳಿ ಅಲ್ಲಿಂದ ಯುವಕನೊಬ್ಬನನ್ನು ಕಳುಹಿಸಿದ್ದಾನೆ.


ಈ ಘಟನೆಯ ಬಗ್ಗೆ ಪೋಷಕರಿಗೆ ತಿಳಿಸುವುದಾಗಿ ಯುವತಿ ಹೇಳಿದ್ದು, ಕಳೆದ ಏಪ್ರಿಲ್ 11ರಂದು ಆಕೆಯ ಮನೆಗೆ ಹೋದ ಮಾಲೀಕ ಮಾತನಾಡುವ ನೆಪದಲ್ಲಿ ತನ್ನ ಬಳಿಯಿದ್ದ ಪರವಾನಗಿ ಪಡೆದ ರಿವಾಲ್ವರ್ ಹಣೆಗಿಟ್ಟು ತನ್ನೊಂದಿಗೆ ಸಹಕರಿಸುವಂತೆ ಒತ್ತಡ ಹೇರಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಬಳಿಕ ನಡೆದಿದ್ದ ಕೃತ್ಯದ ಬಗ್ಗೆ ಇತ್ತೀಚೆಗೆ ಪೋಷಕರ ಬಳಿ ಯುವತಿ ಹೇಳಿಕೊಂಡಿದ್ದಾಳೆ. ಯುವತಿ ನೀಡಿದ ದೂರಿನ ಮೇರೆಗೆ ಭಾನುವಾರ ಮನೆ ಮಾಲೀಕನನ್ನು ಬಂಧಿಸಿರುವ ಅಶೋಕನಗರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Join Whatsapp
Exit mobile version