ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ T 20 ವಿಶ್ವಕಪ್ ನಡೆಯುತ್ತಿದ್ದು, ಪಾಕಿಸ್ತಾನ ತಂಡ, ಭಾರತವನ್ನು ಮಣಿಸ ಬೇಕಾದರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಬೇಗನೆ ಕಟ್ಟಿ ಹಾಕಬೇಕೆಂದು ಮಾಜಿ ವೇಗದ ಬೌಲರ್ ಉಮರ್ ಗುಲ್ ಮಹತ್ವದ ಸಲಹೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ T 20 ವಿಶ್ವಕಪ್ ಪಂದ್ಯಾಟವು ಅಕ್ಟೋಬರ್ 24 ರಿಂದ ಆರಂಭವಾಗಲಿದೆ. 2019 ರ ವಿಶ್ವಕಪ್ ನಂತರ ಇದೇ ಮೊದಲ ಬಾರಿಗೆ ಉಭಯ ತಂಡಗಳು ಅಂತಾರಾಷ್ಟ್ರೀಯ ಪಂದ್ಯಾಟದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಉಭಯ ರಾಷ್ಟ್ರಗಳ ಗಡಿಯಾಚಿಗಿನ ಉದ್ವಿಗ್ನತೆಯ ನಡುವೆ ಭಾರತ ಮತ್ತು ಪಾಕಿಸ್ತಾನದ ಹೈವೋಲ್ಟೇಜ್ ಪಂದ್ಯಾಟಕ್ಕಾಗಿ 2 ತಂಡಗಳು ಸಜ್ಜಾಗಿವೆ.
ಭಾರತ ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ 12 – 0 ಅಂತರದ ದಾಖಲೆಗಳನ್ನು ಹೊಂದಿದೆ. ವಿಶ್ವಕಪ್ ಏಕದಿನ ಪಂದ್ಯದಲ್ಲಿ ಭಾರತ ಏಳು ಬಾರಿ ಮತ್ತು T 20 ವಿಶ್ವಕಪ್ ನಲ್ಲಿ ಐದು ಬಾರಿ ಗೆದ್ದುಕೊಂಡಿದೆ.
ಈ ಮಧ್ಯೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಉಮರ್ ಗುಲ್ ಅವರು ಪಾಕಿಸ್ತಾನ ಭಾರತವನ್ನು ಮಣಿಸ ಬೇಕಾದರೆ 2017 ಚಾಂಪಿಯನ್ಸ್ ಟ್ರೋಫಿ ವಿಜೇತ ಪಾಕಿಸ್ತಾನ ತಂಡ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಬೇಗನೆ ಕಟ್ಟಿಹಾಕ ಬೇಕಾಗಿದೆ ಎಂದು ಮಹತ್ವದ ಸಲಹೆ ನೀಡಿದ್ದಾರೆ.
ಭಾರತ ತಂಡ ಉತ್ತಮ ಫ್ರಾರ್ಮ್ ನಲ್ಲಿದ್ದು, ಐಪಿಎಲ್ ನಲ್ಲಿ ಭಾರತದ ಆಟಗಾರರು ಭಾರೀ ಶ್ರಮವಹಿಸುತ್ತಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಭಾರತದ ಅಗ್ರ ಕ್ರಮಾಂಕದ ಆಟಗಾರರಾಗಿದ್ದಾರೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ತಂಡ ಅವರಿಬ್ಬರನ್ನು ಬೇಗನೆ ಪೆವಿಲಿಯನ್ ಕಡೆಗೆ ಕಳುಹಿಸುವ ಕಾರ್ಯಕ್ಕೆ ಮುಂದಾಗಲಿ ಎಂದು ಪಾಕಿಸ್ತಾನಕ್ಕೆ ಸಲಹೆ ನೀಡಿದ್ದಾರೆ.