Home ಟಾಪ್ ಸುದ್ದಿಗಳು ಅಭಿಮಾನಿಗಳಿಗೆ ಮಧ್ಯದ ಬೆರಳು ತೋರಿಸಿದ ಗೌತಮ್ ಗಂಭೀರ್ ; ವ್ಯಾಪಕ ಆಕ್ರೋಶ

ಅಭಿಮಾನಿಗಳಿಗೆ ಮಧ್ಯದ ಬೆರಳು ತೋರಿಸಿದ ಗೌತಮ್ ಗಂಭೀರ್ ; ವ್ಯಾಪಕ ಆಕ್ರೋಶ

ಹೊಸದಿಲ್ಲಿ: ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ, ಬಿಜೆಪಿ ಸಂಸದ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಅಭಿಮಾನಿಗಳತ್ತ ಮಧ್ಯದ ಬೆರಳನ್ನು ತೋರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಏಷ್ಯಾ ಕಪ್ 2023 ರಲ್ಲಿ ನಡೆಯುತ್ತಿರುವ ಭಾರತ ಮತ್ತು ನೇಪಾಳ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಇದೀಗ ಈ ಅನುಚಿತ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್​ನಲ್ಲಿ ಗೌತಮ್ ಗಂಭೀರ್ ಪ್ಯಾನೆಲಿಸ್ಟ್ ಮತ್ತು ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೇಪಾಳ ವಿರುದ್ಧದ ಪಂದ್ಯದ ವೇಳೆ ಮೈದಾನದಲ್ಲಿ ಕಾಣಿಸಿಕೊಂಡಿದ್ದ ಗಂಭೀರ್ ಸ್ಟೇಡಿಯಂಗೆ ಹಿಂತಿರುಗುತ್ತಿದ್ದಾಗ ಅಭಿಮಾನಿಗಳು ಕೊಹ್ಲಿ-ಕೊಹ್ಲಿ ಎಂದು ಘೋಷಣೆ ಕೂಗಿದರು.

ಇದರಿಂದ ಕುಪಿತಗೊಂಡ ಗಂಭೀರ್ ಅಭಿಮಾನಿಗಳತ್ತ ಮಧ್ಯದ ಬೆರಳನ್ನು ತೋರಿಸಿ ನಡೆದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಗಂಭೀರ್ ವರ್ತನೆಗೆ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ.

ಐಪಿಎಲ್ 2023 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಆರ್​ಸಿಬಿ ವಿರುದ್ಧದ ಪಂದ್ಯವನ್ನು ಗೆದ್ದ ಬಳಿಕ ಅಭಿಮಾನಿಗಳಿಗೆ ಬಾಯಿ ಮುಚ್ಕೊಂಡು ಇರಬೇಕೆಂದು ಸೂಚಿಸಿದ್ದರು. ಆ ನಂತರ ಲಕ್ನೋನಲ್ಲಿ ನಡೆದ ಆರ್​ಸಿಬಿ-ಎಲ್​ಎಸ್​ಜಿ ನಡುವಣ ಪಂದ್ಯವು ಗಂಭೀರ್ ಹಾಗೂ ವಿರಾಟ್ ಕೊಹ್ಲಿ ನಡುವಣ ಮಾತಿನ ಚಕಮಕಿಗೆ ಕಾರಣವಾಗಿತ್ತು.

https://twitter.com/hemanth90108159/status/1698703102344646800

ಅಷ್ಟೇ ಅಲ್ಲದೆ ಮೈದಾನದಲ್ಲೇ ಗಂಭೀರ್ ಹಾಗೂ ಕೊಹ್ಲಿ ಜಗಳಕ್ಕಿಳಿದಿದ್ದರು. ಈ ಅಹಿತಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಐಪಿಎಲ್ ಆಡಳಿತ ಮಂಡಳಿ ಇಬ್ಬರಿಗೆ ಪಂದ್ಯದ ಶೇ.100 ರಷ್ಟು ದಂಡ ವಿಧಿಸಿದ್ದರು.

ಇದೀಗ ಮತ್ತೊಮ್ಮೆ ವಿರಾಟ್ ಕೊಹ್ಲಿಯ ಹೆಸರು ಕೇಳುತ್ತಿದ್ದಂತೆ ಗಂಭೀರ್ ಕೆಂಡಮಂಡಲರಾಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಘನತೆಯನ್ನು ಮರೆತು ವರ್ತಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Join Whatsapp
Exit mobile version