Home ಟಾಪ್ ಸುದ್ದಿಗಳು ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಮೋಹನ್ ವಿರುದ್ಧದ ಕೋಕಾ ಕಾಯಿದೆ ಆರೋಪಗಳನ್ನು ಮರುನಿಗದಿಗೊಳಿಸಿದ ಸುಪ್ರೀಂಕೋರ್ಟ್

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿ ಮೋಹನ್ ವಿರುದ್ಧದ ಕೋಕಾ ಕಾಯಿದೆ ಆರೋಪಗಳನ್ನು ಮರುನಿಗದಿಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮೋಹನ್ ನಾಯಕ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯಡಿ (ಕೋಕಾ- ಕೆಸಿಒಸಿಎ) ರಾಜ್ಯ ಹೈಕೋರ್ಟ್ ಕೈಬಿಟ್ಟಿದ್ದ ಆರೋಪಗಳನ್ನು ಸುಪ್ರೀಂಕೋರ್ಟ್ ಮರುನಿಗದಿಗೊಳಿಸಿದೆ.
ಗೌರಿ ಅವರ ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಪೀಠ ಆರೋಪಿಯ ವಿರುದ್ಧದ ಆರೋಪಗಳನ್ನು ಮರುನಿಗದಿಪಡಿಸಿತು.

ಬೆಂಗಳೂರು ಪೊಲೀಸ್ ಆಯುಕ್ತರು 2018ರಲ್ಲಿ ನೀಡಿದ್ದ ಆದೇಶವನ್ನು ಮತ್ತು ನಂತರದ ಪೂರಕ ಆರೋಪಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ 2021 ರ ಏಪ್ರಿಲ್ 22 ರಂದು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದಿದೆ. ನಾಯಕ್ ವಿರುದ್ಧ ಕೋಕಾ ಕಾಯಿದೆಯ ಕೆಸಿಒಸಿಎ ಸೆಕ್ಷನ್ 3 (1) (i), 3 (2), 3 (3) ಮತ್ತು 3 (4) ಅಡಿಯಲ್ಲಿ ನಿಗದಿಪಡಿಸಲಾಗಿದ್ದ ಆರೋಪಗಳನ್ನು ಕೈಬಿಡಲಾಗಿತ್ತು. ಈಗ ಈ ಆರೋಪಗಳು ಮರುನಿಗದಿಯಾಗಿವೆ.

ಕೃತ್ಯ ಎಸಗುವ ಮೊದಲು ಮತ್ತು ನಂತರ ಕೊಲೆಗಾರರಿಗೆ ಆಶ್ರಯ ನೀಡುವಲ್ಲಿ ನಾಯಕ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ಮೇಲ್ಮನವಿಯಲ್ಲಿ ತಿಳಿಸಲಾಗಿತ್ತು.

ಕೋಕಾ ಕಾಯಿದೆ 2000ರ ಸೆಕ್ಷನ್ 24ನ್ನು ಪರಿಶೀಲಿಸದೆ ಹೈಕೋರ್ಟ್ ತಪ್ಪೆಸಗಿದೆ ಎಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿತ್ತು. ಕಾಯಿದೆ ಪ್ರಕಾರ ಎಡಿಜಿಪಿ ಶ್ರೇಣಿಗಿಂತ ಕೆಳಗಿರುವ ಯಾವುದೇ ಅಧಿಕಾರಿ ಪೂರ್ವಾನುಮತಿ ನೀಡಬಾರದು ಎನ್ನಲಾಗಿದ್ದು ಇದನ್ನು ಪ್ರಸ್ತುತ ಪ್ರಕರಣದಲ್ಲಿ ಉಲ್ಲಂಘಿಸಲಾಗಿದೆ ಎಂದು ಅರ್ಜಿ ತಿಳಿಸಿತ್ತು.

ವಿಚಾರಣೆ ವೇಳೆ ಸುಪ್ರೀಂಕೋರ್ಟ್ ವಿಚಾರಣಾ ಅನುಮತಿ ಹಂತಕ್ಕೂ ಮುನ್ನ ಸಂಶಯದ ಲಾಭವನ್ನು ಆರೋಪಿ ಮೋಹನ್ ನಾಯಕ್ಗೆ ನೀಡಬಹುದಾಗಿತ್ತು. ಆದರೆ, ಆರೋಪಿಯ ವಿರುದ್ಧದ ಆರೋಪಪಟ್ಟಿಯನ್ನು ವಜಾ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ವಿಚಾರಣೆ ವೇಳೆ ಈ ಹಿಂದೆ ನ್ಯಾಯಾಲಯ ಹೇಳಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ “ಸಾಕ್ಷ್ಯದ ಕೊರತೆ ಇದೆ ಎಂದು ನೀವು ವಾದಿಸಬಹುದು. ಆದರೆ, ಹೈಕೋರ್ಟ್ ಆರೋಪಪಟ್ಟಿಯನ್ನೇ ವಜಾ ಮಾಡಿದೆ. ಇದು ಸರಿಯಲ್ಲ ಮತ್ತು ನ್ಯಾಯಿಕ ವ್ಯಾಪ್ತಿ ಮೀರಿದ್ದಾಗಿದೆ. ಈ ರೀತಿ ಆರೋಪಪಟ್ಟಿಯನ್ನು ವಜಾ ಮಾಡಲಾಗದು. ಆರೋಪಪಟ್ಟಿಯ ವಿಶ್ಲೇಷಣೆಯನ್ನು ಹೈಕೋರ್ಟ್ ನಡೆಸಿಲ್ಲ. ಹೀಗಿರುವಾಗ ಹೈಕೋರ್ಟ್ ಆರೋಪಪಟ್ಟಿಯನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿಲ್ಲ ಎಂದೇ ಹೇಳಬೇಕಾಗುತ್ತದೆ” ಎಂದು ಅದು ನುಡಿದಿತ್ತು.

“ನಿಜವಾಗಿಯೂ ಅಪರಾಧ ಕೃತ್ಯ ಎಸಗಿದ್ದರಲ್ಲಿ ತಮ್ಮ ಕಕ್ಷಿದಾರನ ಪಾತ್ರವಿಲ್ಲ. ಕೋಕಾ ಅಡಿ ತಮ್ಮ ಕಕ್ಷಿದಾರರನ್ನು ವಶಕ್ಕೆ ಪಡೆಯಲು ಅಪರಾಧ ಕೂಟದಲ್ಲಿ ತಮ್ಮ ಕಕ್ಷಿದಾರರು ಭಾಗಿಯಾಗಿದ್ದರು ಎಂಬುದಕ್ಕೆ ಯಾವುದೇ ಸಾಕ್ಷಿಯಿಲ್ಲ” ಎಂದು ಆರೋಪಿ ಮೋಹನ್ ನಾಯಕ್ ಪರ ಹಿರಿಯ ವಕೀಲ ಬಸವ ಪ್ರಭು ಎಸ್ ಪಾಟೀಲ್ ಅವರು ವಾದಿಸಿದ್ದರು. ಇದಕ್ಕೆ ಪೀಠವು ಇದನ್ನು ವಿಚಾರಣೆ ಹಂತದಲ್ಲಿ ನೋಡಬಹುದಾಗಿದೆ ಎಂದು ಹೇಳಿತ್ತು


(ಕೃಪೆ: ಬಾರ್ & ಬೆಂಚ್)

Join Whatsapp
Exit mobile version