Home ಟಾಪ್ ಸುದ್ದಿಗಳು ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.

2017ರ ಸೆಪ್ಟೆಂಬರ್ 5ರಂದು ತನ್ನ ಮನೆಯ ಹೊರಗೆ ಖ್ಯಾತ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ನಡೆಸಲಾಗಿತ್ತು. ಈ ಪ್ರಕರಣದ ಮಾಸ್ಟರ್ ಮೈಂಡ್’ಗಳಲ್ಲಿ ಒಬ್ಬರಾದ ಹೃಷಿಕೇಶ್ ದೇವಾಡಿಗರ್ ಎಂಬಾತ ಬಂಧನಕ್ಕೊಳಗಾಗಿ 90 ದಿನಗಳವರೆಗೂ ಎಸ್.ಐ.ಟಿ ಚಾರ್ಜ್’ಶೀಟ್ ಸಲ್ಲಿಸದ ಕಾರಣ ಜಾಮೀನಿನ ಮೇಲೆ ಬಿಡುಗಡೆಯಾಗುವ ಹಕ್ಕಿದೆ ಎಂಬ ಆಧಾರದಲ್ಲಿ ಈ ವರ್ಷ ಕರ್ನಾಟಕ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು.

ಆದರೆ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕ ಸದಸ್ಯ ಪೀಠ, ದೇವಾಡಿಗರ್ ಎಂಬಾತ ತಲೆಮರೆಸಿಕೊಂಡಿರುವಾಗಲೇ ಆತನ ವಿರುದ್ಧ ಚಾರ್ಜ್’ಶೀಟ್ ಸಲ್ಲಿಸಿರುವುದರಿಂದ ಜಾಮೀನು ಪಡೆಯಲು ಅರ್ಹನಲ್ಲ ಎಂದು ತಿಳಿಸಿದೆ.

ಎಸ್.ಐ.ಟಿ.ಯು ಆರೋಪಿ ದೇವಾಡಿಗರ್ ವಿರುದ್ಧ ಜೂನ್ 25, 2020ರಂದು ಹೆಚ್ಚುವರಿ ಚಾರ್ಜ್’ಶೀಟ್ ಅನ್ನು ಸಲ್ಲಿಸಿದೆ ಮತ್ತು ಆದ್ದರಿಂದ ಕಾನೂನುಬದ್ಧ ಡೀಫಾಲ್ಟ್ ಜಾಮೀನು ನೀಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ತಿಳಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ಬಳಿಕ ನಾಪತ್ತೆಯಾಗಿದ್ದ ದೇವಾಡಿಗರ್ ಎಂಬಾತನನ್ನು 2020ರ ಜನವರಿಯಲ್ಲಿ ಜಾರ್ಖಂಡಿನಲ್ಲಿ ಎಸ್.ಐ.ಟಿ ತಂಡ ಬಂಧಿಸಿತ್ತು. ಆತ ಹಿಂದುತ್ವ ಉಗ್ರಗಾಮಿ ಸಂಘಟನೆಯಾದ ಸನಾತನ ಸಂಸ್ಥೆ ಮತ್ತು ಅದರ ಅಂಗಸಂಸ್ಥೆಯಾದ ಹಿಂದೂ ಜನಜಾಗೃತಿ ಸಮಿತಿ (HJS) ಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಆರೋಪಿಸಲಾಗಿತ್ತು.

ಅಲ್ಲದೆ 2013ರಲ್ಲಿ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್, 2015ರಲ್ಲಿ ಎಡಪಂಥೀಯ ಚಿಂತಕ ಗೋವಿಂದ್ ಪನ್ಸಾರೆ, 2015ರಲ್ಲಿ ಕನ್ನಡ ವಿದ್ವಾಂಸ ಎಂ.ಎಂ. ಕಲ್ಬುರ್ಗಿ ಎಂಬವರನ್ನು ಇದೇ ತಂಡ ಹತ್ಯೆ ನಡೆಸಿದೆ ಎಂದು ಆರೋಪಿಸಲಾಗಿದೆ.

Join Whatsapp
Exit mobile version