Home ಟಾಪ್ ಸುದ್ದಿಗಳು ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಭೇಟಿಯಾದ ಮಾಜಿ ಸಂಸದ ಪ್ರತಾಪ್ ಸಿಂಹ

ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಭೇಟಿಯಾದ ಮಾಜಿ ಸಂಸದ ಪ್ರತಾಪ್ ಸಿಂಹ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿಯಾಗಿರುವುದು ವಿವಾದ ಸೃಷ್ಟಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ‌ ಪ್ರತಾಪ್ ಸಿಂಹ‌ ಸ್ನೇಹಿತ ಎಂಬ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆರೋಪಿಗಳಾದ ನವೀನ್ ಕುಮಾರ್, ಅಮಿತ್, ಎಚ್ಎಲ್ ಸುರೇಶ್ ಅವರಿಗೆ ಜುಲೈ 16ರಂದು ಜಾಮೀನು ನೀಡಿತ್ತು. ಇಂದು ಪ್ರತಾಪ್ ಸಿಂಹ ಅವರು ಕೊಲೆ‌ ಆರೋಪಿ ನವೀನ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೆ.


ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಮೊದಲಿಗೆ ಆರೋಪಿ ನಂ-1 ಆಗಿ, ನಂತರ A-17 ಆಗಿ, ಆರೂವರೆ ವರ್ಷ ಜೈಲಿನಲ್ಲಿದ್ದು ಇತ್ತೀಚೆಗೆ ಜಾಮೀನಿನ ಹೊರಬಂದಿರುವ ಸ್ನೇಹಿತ ಮದ್ದೂರು ನವೀನ್ ರನ್ನು ಭೇಟಿಯಾಗಿ ಅರೋಗ್ಯ ವಿಚಾರಿಸಿದೆ. ಮದ್ದೂರಿನ ಯುವ ಸ್ನೇಹಿತರೂ ಜತೆಗಿದ್ದರು ಎಂದು ಬರೆದುಕೊಂಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಪ್ರತಾಪ್ ಸಿಂಹ ಭೇಟಿಯಾಗಿರುವುದು ವಿವಾದಕ್ಕೆ ನಾಂದಿ ಹಾಡಿದೆ. ಕೊಲೆ ಆರೋಪಿಯೊಬ್ಬ ಪ್ರತಾಪ್ ಸಿಂಹ ಸ್ನೇಹಿತ ಎಂಬ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.

ಕೆಲ ದಿನಗಳ ಹಿಂದೆ ಬೆಂಗಳೂರಿನ ಮಾಂಸ ಪ್ರಕರಣಕ್ಕೆ ಸಂಬಂಧಿಸಿ ಪುನೀತ್ ಕೆರೆಹಳ್ಳಿ ಬಂಧನ ವಿರೋಧಿಸಿ ಎಸಿಪಿ ಚಂದನ್ ಅವರ ಮೇಲೆ ಪ್ರತಾಪ್ ಸಿಂಹ ಹಲ್ಲೆ ಆರೋಪ ಹೊರಿಸಿದ್ದರು. ಅಪರಾಧ ಹಿನ್ನೆಲೆಯ ಪುನೀತ್ ಕೆರೆಹಳ್ಳಿ ನನ್ನ ಸಹೋದರ ಎಂದಿದ್ದರು.‌ ಬೆನ್ನಲ್ಲೇ ಗೌರಿ ಲಂಕೇಶ್ ಹತ್ಯೆ ಆರೋಪಿಯನ್ನು ಭೇಟಿಯಾಗಿ ಆತ ನನ್ನ ಸ್ನೇಹಿತ ಎಂದಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಎಬ್ಬಿಸಿದ್ದು, ಕೊಲೆ‌ ಆರೋಪಿಗಳು ಪ್ರತಾಪ್ ಸಿಂಹ ಅವರಿಗೆ ಸಹೋದರ ಮತ್ತು ಸ್ನೇಹಿತರು ಎಂದು ಪ್ರತಾಪ್ ಸಿಂಹ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

Join Whatsapp
Exit mobile version