ನವದೆಹಲಿ: 2010 ರಲ್ಲಿ ಕಾಮನ್ ವೆಲ್ತ್ ಕ್ರೀಡಾಕೂಟಕ್ಕಾಗಿ ಕಟ್ಟಿದ ದಿಲ್ಲಿಯ ಉತ್ತಮ ಕ್ರೀಡಾ ಗ್ರಾಮವು ಐಎಎಸ್ ಅಧಿಕಾರಿಗಳ ನಾಯಿ ಪಾಲಾಗಬೇಕೆ?
ತ್ಯಾಗರಾಜ ಸ್ಟೇಡಿಯಂ ಎಂಬಲ್ಲಿ ಅಥ್ಲಿಟ್ ಗಳು, ಕಾಲ್ಚೆಂಡಾಟಗಾರರು ಮೊದಲಾದವರು ಸಂಜೆ ಏಳು ಗಂಟೆಯ ವರೆಗೆ ತರಬೇತಿಯಲ್ಲಿ ತೊಡಗಿರುತ್ತಿದ್ದರು. ಕೆಲವು ತಿಂಗಳುಗಳಿಂದ ನಾಯಿಗಳೊಡನೆ ಐಎಎಸ್ ಅಧಿಕಾರಿಗಳು ವಾಕಿಂಗ್ ಬರುತ್ತಾರೆ ಎಂದು ಕ್ರೀಡಾಳುಗಳನ್ನು ಮೈದಾನದಿಂದ ಓಡಿಸಲಾಗುತ್ತಿದೆ. ದಿಲ್ಲಿಯ ಕಂದಾಯ ಪ್ರಿನ್ಸಿಪಲ್ ಸೆಕ್ರೆಟರಿ ಸಂಜೀವ್ ಕಿರ್ವಾರ್ ಮತ್ತವರ ನಾಯಿ ವಾಕಿಂಗಿಗೆ ಕ್ರೀಡಾಳುಗಳನ್ನು ಮೊದಲೇ ಜಾಗ ಖಾಲಿ ಮಾಡಿಸಿದ್ದಾರೆ.
“ನಾನು ನನ್ನ ನಾಯಿ ಜೊತೆ ವಾಕಿಂಗ್ ಹೋಗುವುದು ಸತ್ಯ. ಆದರೆ ಕ್ರೀಡಾಳುಗಳನ್ನು ಓಡಿಸಿದ್ದೇನೆನ್ನುವುದು ಸುಳ್ಳು.” ಎನ್ನುತ್ತಾರೆ 1994ನೇ ಬ್ಯಾಚಿನ ಐಎಎಸ್ ಅಧಿಕಾರಿ ಕಿರ್ವಾರ್.
ಆದರೆ ಸ್ಟೇಡಿಯಂ ಕಾವಲುಗಾರರು ಆರೂವರೆ ಗಂಟೆಗೆ ಮೊದಲೇ ವಿಸಿಲ್ ಊದುತ್ತ ಬಂದು ಕ್ರೀಡಾಳುಗಳು ಹೊರ ಹೋಗುವಂತೆ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿದೆ.
“ಅಧಿಕೃತ ಪ್ರಾಕ್ಟೀಸ್ ಸಮಯ ಸಂಜೆ 4ರಿಂದ 6 ಗಂಟೆ. ಬಿಸಿಲ ಕಾರಣಕ್ಕೆ 7 ಗಂಟೆಯವರೆಗೂ ತರಬೇತಿಗೆ ಅವಕಾಶ ನೀಡುತ್ತಿದ್ದೆವು. ಯಾವುದೇ ಸರಕಾರಿ ಅಧಿಕಾರಿ ಆ ಸಮಯ ಬಳಸಿಕೊಳ್ಳುತ್ತಿದ್ದಾರೆಂಬುದು ನನ್ನ ಗಮನಕ್ಕೆ ಬಂದಿಲ್ಲ” ಎನ್ನುತ್ತಾರೆ ಸ್ಟೇಡಿಯಮ್ಮಿನ ಆಡಳಿತಾಧಿಕಾರಿ ಅಜಿತ್ ಚೌಧರಿ.
ಇದು ದೆಹಲಿ ಸರಕಾರಡಿ ಬರುವ ಸ್ಟೇಡಿಯಂ. ನಿಯಮದಂತೆ 7 ಗಂಟೆಗೆ ಮುಚ್ಚುತ್ತೇವೆ ಎಂದೂ ಅವರು ಹೇಳಿದರು.
ಆದರೆ ಏಳೂವರೆ ಹೊತ್ತಿಗೆ ನಾಯಿ ವಾಕಿಂಗ್ ಬಂದುದನ್ನು ಪತ್ರಕರ್ತರು ನೋಡಿದ್ದು, ಅಧಿಕಾರಿಯ ನಾಯಿ ಫುಟ್ಬಾಲ್ ಟ್ರ್ಯಾಕನ್ನು ಸಹ ಎಳೆದಾಡುತ್ತಿರುವುದು ದೃಢಪಟ್ಟಿದೆ.
“ನಾನು ಯಾವ ಅಥ್ಲೀಟ್ ಗೂ ಹೊರ ಹೋಗಲು ಹೇಳಿಲ್ಲ. ನನ್ನ ಜೊತೆ ನಾಯಿ ಇದ್ದರೂ ಅದನ್ನು ಟ್ರ್ಯಾಕ್ ಮೇಲೆಲ್ಲ ಬಿಡುವುದಿಲ್ಲ. ವಾಕಿಂಗ್ ಮಾಡಿದರೆ ತಪ್ಪೇನು” ಎನ್ನುತ್ತಾರೆ ಕಿರ್ವಾರ್.
“ಈಗಿನ ಸ್ಥಿತಿಯನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ನಮ್ಮ ಮಕ್ಕಳ ಕ್ರೀಡಾಭ್ಯಾಸಕ್ಕೆ ತೊಂದರೆ ಆಗಿದೆ” ಎಂದು ಪೋಷಕರೊಬ್ಬರು ಆರೋಪಿಸಿದ್ದಾರೆ.
ವಿಷಯ ತಿಳಿಯುತ್ತಲೇ ಕರೆ ಮಾಡಿ ಮಾತನಾಡಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರು ಕ್ರೀಡಾಳುಗಳಿಗೆ ಇನ್ನು ಮುಂದೆ ಯಾವುದೇ ಬಗೆಯ ತೊಂದರೆ ಆಗಬಾರದು. ಆದಲ್ಲಿ ಶಿಸ್ತು ಕ್ರಮ ಎದುರಿಸಲು ತಯಾರಾಗಿ ಎಂದು ಎಚ್ಚರಿಸಿದ್ದಾರೆ. ಇದು ಬುಧವಾರದಿಂದ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.