Home ರಾಜ್ಯ ಮಡಿಕೇರಿ | ಸ್ನಾನಕ್ಕೆಂದು ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸಾವು: ಗ್ಯಾಸ್ ಗೀಸರ್ ಸೋರಿಕೆ ಶಂಕೆ

ಮಡಿಕೇರಿ | ಸ್ನಾನಕ್ಕೆಂದು ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿನಿ ಸಾವು: ಗ್ಯಾಸ್ ಗೀಸರ್ ಸೋರಿಕೆ ಶಂಕೆ

ಮಡಿಕೇರಿ: ಸ್ನಾನಕ್ಕೆಂದು ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿನಿ ದಾರುಣ ಸಾವಿಗೀಡಾಗಿದ್ದು, ಗೀಸರ್ ನಲ್ಲಿ ಗ್ಯಾಸ್ ಸೋರಿಕೆಯಾಗಿ ಮೃತಪಟ್ಟಿದ್ದಾಗಿ ಶಂಕಿಸಲಾಗಿದೆ. ಮಡಿಕೇರಿಯ ಡೈರಿ ಫಾರ್ಮ್ ನಲ್ಲಿರುವ ಹೋಂ ಸ್ಟೇ ನಲ್ಲಿ ತಂಗಿದ್ದ ತಮಿಳುನಾಡು ಮೂಲದ ವಿದ್ಯಾರ್ಥಿನಿ ಸ್ನಾನಕ್ಕೆಂದು ತೆರಳಿದ್ದ ವೇಳೆ ಗ್ಯಾಸ್ ಸೋರಿಕೆಯಾಗಿ ಸ್ಥಳದಲ್ಲೇ ಉಸಿರುಗಟ್ಟಿ ಕೊನೆ ಉಸಿರೆಳೆದಿದ್ದಾಳೆ.


ಕುಸಿದು ಬಿದ್ದ ವಿದ್ಯಾರ್ಥಿನಿಯನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ತಪಾಸಣೆ ನಡೆಸುವ ಮುಂಚೆಯೇ ಸಾವಿಗೀಡಾಗಿದ್ದಾಳೆ ಎಂದು ತಿಳಿದು ಬಂದಿದೆ.


ತಮಿಳುನಾಡಿನಿಂದ ಐದು ಮಂದಿಯ ತಂಡ ಕೊಡಗು ಪ್ರವಾಸಕ್ಕೆಂದು ಬಂದಿದ್ದು, ಸ್ಥಳೀಯ ಹೋಂ ಸ್ಟೇನಲ್ಲಿ ತಂಗಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್ ಆನ್ ಮಾಡಿ ಅರ್ಧ ಗಂಟೆ ಬಳಿಕ ಕಿರಿದಾದ ಬಾತ್ ರೂಮಿಗೆ ವಿದ್ಯಾರ್ಥಿನಿ ತೆರಳಿದ್ದಳು ಎನ್ನಲಾಗಿದೆ. ಹೋಂ ಸ್ಟೇಯಲ್ಲಿ ಗಾಳಿ ಹೊರ ಹೋಗಲು ಸೂಕ್ತ ವ್ಯವಸ್ಥೆ ಇಲ್ಲದ ಪರಿಣಾಮ ಉಸಿರು ಗಟ್ಟಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿ ಪೋಷಕರು ಮಡಿಕೇರಿಗೆ ಆಗಮಿಸಿದ್ದು ಪೊಲೀಸ್ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹೋಂಸ್ಟೇ   ಲೈಸೆನ್ಸ್ ರದ್ದುಗೊಳಿಸಿ : ಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ  ಬಿ.ಜಿ. ಅನಂತ ಶಯನ

 ಅನಧಿಕೃತ ಹೋಂ ಸ್ಟೇ ಒಂದರಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಹೋಂ ಸ್ಟೇ ಮಾಲೀಕ ಹೊರದೇಶದಲ್ಲಿ ವಾಸ ಮಾಡುತ್ತಿರುವುದಾಗಿ ಹೇಳಲಾಗಿದೆ. ಇಂತಹ ಹೋಂ ಸ್ಟೇ ಗಳನ್ನು ಮುಚ್ಚಿಸಲು ಹಲವು ಬಾರಿ ಜಿಲ್ಲಾ ಆಡಳಿತ, ಪ್ರವಾಸೋದ್ಯಮ ಇಲಾಖೆಗಳಿಗೆ ಮನವಿ ಮಾಡಲಾಗಿದೆ. ಆದರೆ ಇದಕ್ಕೆ ಸ್ಪಂದಿಸದಿರುವ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಅನಧಿಕೃತ ಹೋಂ ಸ್ಟೇ ಗಳ ಲೈಸೆನ್ಸ್ ಗಳನ್ನು ರದ್ದುಗೊಳಿಸಲಿ ಎಂದು ಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ  ಬಿ.ಜಿ. ಅನಂತ ಶಯನ ಒತ್ತಾಯಿಸಿದ್ದಾರೆ.

Join Whatsapp
Exit mobile version