ವಿರಾಜಪೇಟೆ: ಗಾಂಜಾ ಮಾರಾಟ ಮತ್ತು ಖರೀದಿ ವ್ಯವಹಾರ ನಡೆಸುತ್ತಿದ್ದ ಮೂವರನ್ನು ವಿರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.
ಅಂಬಟ್ಟಿ ಗ್ರಾಮದ ಕೆ. ಹೆಚ್. ನಿಜಾಮುದ್ದಿನ್, ಬಿಟ್ಟಂಗಾಲದ ಪಿ. ಡಿ. ಸೋಮಯ್ಯ ಅಲಿಯಾಸ್ ರೋಷನ್ ಮತ್ತು ಪಿ. ಸಿ. ಕವನ್ ಮಾದಯ್ಯ ಎಂಬವರು ಬಂಧಿಸಲ್ಪಟ್ಟ ಆರೋಪಿಗಳು.
ಪಂಜರುಪೇಟೆಯ ಗಣಪತಿ ಬೀದಿಯಿಂದ ನಿಸರ್ಗ ಲೇ ಔಟ್ ಕಡೆಗೆ ತೆರಳುವ ರಸ್ತೆಯಲ್ಲಿರುವ ಪಾಪಣ್ಣರವರ ಮರದ ಮಿಲ್ ಹತ್ತಿರ ಗಾಂಜಾ ವ್ಯವಹಾರ ನಡೆಸುತ್ತಿದ್ದ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಿ. ವಿ. ಶ್ರೀಧರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ಆರೋಪಿಗಳಿಂದ 1 ಕೆಜಿ 605 ಗ್ರಾಂ ಗಾಂಜಾ, ರೂ. 1 ಸಾವಿರ ನಗದು ಹಣ, 1 ಮಾರುತಿ 800 ಕಾರು, 1 ಎಸ್ಟಿಮ್ ಕಾರು ಮತ್ತು 3 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.