ಗಂಗಾವತಿ: ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಕೊಲ್ಲಿ ನಾಗೇಶ್ವರ ಕಾಲೇಜಿನ ಆವರಣದ ಒಳಗಡೆ ಬಂದು ವಿದ್ಯಾರ್ಥಿಗಳ ವೀಡಿಯೋ ಮಾಡಿದ ಪಬ್ಲಿಕ್ ಟಿವಿಯ ಪತ್ರಕರ್ತ ಮುಕ್ಕಣ್ಣ ಕತ್ತಿ ಅವರನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.
ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಘಟನೆಯಲ್ಲಿ ವರದಿಗಾರರೊಬ್ಬರು ಸಣ್ಣ ಬಾಲಕಿಯನ್ನು ಅಟ್ಟಾಡಿಸಿಕೊಂಡು ಹೋಗಿ ಫೋಟೋ ತೆಗೆದ ಘಟನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿ ತಪ್ಪಿತಸ್ಥ ಮಾಧ್ಯಮ ಪ್ರತಿನಿಧಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಪತ್ರಕರ್ತರು ತಪ್ಪೊಪ್ಪಿಗೆ ಮುಚ್ಚಳಿಕೆ ಬರೆದು ಪ್ರಕರಣದಿಂದ ಪಾರಾಗಲು ಯತ್ನಿಸಿದ್ದರು.
ಈ ಮಧ್ಯೆ ಗಂಗಾವತಿಯ ಕೊಲ್ಲಿ ನಾಗೇಶ್ವರ ಕಾಲೇಜಿನ ಆವರಣ ಪ್ರವೇಶಿಸಿದ ಪಬ್ಲಿಕ್ ಟಿವಿಯ ಮುಕ್ಕಣ್ಣ ಕತ್ತಿ, ಹಿಜಾಬ್ ಕುರಿತು ವೀಡಿಯೋ ಮಾಡಲು ಮುಂದಾದಾಗ ವಿದ್ಯಾರ್ಥಿಗಳು ಮತ್ತು ಪೋಷಕರು ಅವರನ್ನು ತರಾಟೆಗೆ ತೆಗೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.