►ಮೂರು ದಿನಗಳಿಂದ ಮನೆಗೆ ಕಲ್ಲು ತೂರಾಟ ನಡೆಸುತ್ತಿದ್ದ ದುಷ್ಕರ್ಮಿಗಳು
ಗಂಗಾವತಿ: ಮುಸ್ಲಿಮ್ ವ್ಯಕ್ತಿಯ ಮನೆಯ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು ಮಹಿಳೆಯರ ಸಹಿತ ಕುಟುಂಬ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಭಾನುವಾರ ಗಂಗಾವತಿಯ ನಾಗನಹಳ್ಳಿ ನಡೆದಿದೆ.
ತೀವ್ರ ಗಾಯಗೊಂಡ ಮೌಲಾ ಹುಸೇನ್, ಹೊನ್ನೂರ್ ಸಾಬ್ ಹಾಗೂ ಝಾಕಿರ್ ಎಂಬವರು ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಸಂತ್ರಸ್ತ ಕುಟುಂಬ, ಗಂಗಾವತಿ ಪೊಲೀಸರಿಗೆ ಹಲ್ಲೆ ನಡೆಸಿದ 22 ಮಂದಿಯ ವಿರುದ್ಧ ದೂರು ನೀಡಿದೆ.
ಘಟನೆಯ ಹಿನ್ನೆಲೆ
ಒಂದು ತಿಂಗಳ ಹಿಂದೆ ಅಶೋಕ್ ಎಂಬಾತ ರಾಮ ಮತ್ತು ಸೀತೆಯ ಬಗ್ಗೆ ಅವಹೇಳನಕಾರಿ ಬರಹಗಳುಳ್ಳ ಸ್ಟೇಟಸ್ ಹಾಕಿದ್ದ. ಈ ಸ್ಟೇಟಸ್ ಅನ್ನು ಕಾಪಿ ಮಾಡಿದ ಅಬ್ದುಲ್ ಎಂಬಾತ ತನ್ನ ವಾಟ್ಸಪ್ ನಲ್ಲಿ ಅದನ್ನೇ ಸ್ಟೇಟಸ್ ಹಾಕಿದ್ದಾನೆ. ಇದನ್ನು ನೋಡಿದ ಸಂಘಪರಿವಾರದ ಕಾರ್ಯಕರ್ತರು ಅಬ್ದುಲ್ ನ ಮೇಲೆ ಹಲ್ಲೆ ನಡೆಸಿದ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಈ ಮಧ್ಯೆ ಮಾತುಕತೆಗೆ ಬರುವಂತೆ ಸಂಘಪರಿವಾರದ ಕಾರ್ಯಕರ್ತರು ಅಬ್ದುಲ್ ಎಂಬಾತನನ್ನು ಕರೆದಿದ್ದಾರೆ. ಅಬ್ದುಲ್ ಮತ್ತು ಇತರ 20 ಮಂದಿ ಮಾತುಕತೆಗೆ ಹೋದಾಗ 100 ಮಂದಿಯಿದ್ದ ಸಂಘಪರಿವಾರದ ಕಾರ್ಯಕರ್ತರು 20 ಮಂದಿಯ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಎರಡೂ ಕಡೆಯವರ ನಡುವೆ ಮಾರಾಮಾರಿ ನಡೆದಿದ್ದು, ಹಲವರು ಗಾಯಗೊಂಡಿದ್ದರು.
ಈ ಬಗ್ಗೆ ಗಂಗಾವತಿ ಪೊಲೀಸರು ಪ್ರಕರಣ ದಾಖಲಿಸಿ ಹಲವರನ್ನು ಬಂಧಿಸಿದ್ದರು. ಜಾಮೀನಿನ ಮೇಲೆ ಎಲ್ಲರೂ ಬಿಡುಗಡೆಯಾಗಿದ್ದಾರೆ. ಬಳಿಕ ವಿವಾದ ತಣ್ಣಗಾಗಿತ್ತು.
ಆದರೆ ಎರಡು ಮೂರು ದಿನಗಳ ಬಳಿಕ ಸಂಘಪರಿವಾರದ ಕಾರ್ಯಕರ್ತರು ರಾತ್ರಿ ವೇಳೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಮೌಲಾ ಹುಸೇನ್ ಎಂಬವರ ಮನೆಯ ಮೇಲೆ ನಿರಂತರ ಕಲ್ಲೂ ತೂರಾಟ ನಡೆಸುತ್ತಿದ್ದರು. ನಿನ್ನೆ ರಾತ್ರಿ ಕೂಡ ಕಲ್ಲು ತೂರಾಟ ನಡೆಸಿದಾಗ ಮನೆಯಿಂದ ಹೊರಗೆ ಬಂದ ಹುಸೇನ್ ಮತ್ತು ಅವರ ತಂದೆ ಹೊನ್ನೂರು ಸಾಬ್, ಝಾಕಿರ್ ಮೇಲೆ ದುಷ್ಕರ್ಮಿಗಳ ತಂಡ ತೀವ್ರವಾಗಿ ಹಲ್ಲೆ ನಡೆಸಿದೆ. ಮಾತ್ರವಲ್ಲ ಮನೆಯ ಒಳಗೆ ನುಗ್ಗಿ ಮಹಿಳೆಯರಿಗೆ ಬೆದರಿಕೆ ಹಾಕಿದೆ. ಭಯಭೀತರಾದ ಮಹಿಳೆಯರು ಕೊಠಡಿಗೆ ಬಾಗಿಲು ಹಾಕಿ ಕುಳಿತಿದ್ದರಿಂದ ಹಲ್ಲೆಯಿಂದ ಬಚಾವಾಗಿದ್ದಾರೆ.
ಇಷ್ಟಕ್ಕೆ ನಿಲ್ಲಿಸದ ಸಂಘಪರಿವಾರದ ಕಾರ್ಯಕರ್ತರು ಮನೆಯ ಹೊರಗೆ ನಿಲ್ಲಿಸಿದ್ದ ಬೈಕ್ ಗೆ ಹಾನಿ ಮಾಡಿ ದಾಂಧಲೆವೆಬ್ಬಿಸಿ ಅಲ್ಲಿಂದ ಪರಾರಿಯಾಗಿದ್ದಾರೆ.
ಹಲ್ಲೆ ನಡೆಸಿದ ತಂಡದಲ್ಲಿದ್ದ ರಾಕೇಶ್, ಉಮೇಶ್, ಕಾರ್ತಿಕ್, ನಾಗರಾಜ, ಅಶೋಕ್, ಅಜ್ಜಪ್ಪ, ಮಂಜು, ಸ್ವಾಮಿ, ಮಹೇಶ್, ಗಣೇಶ್, ವಿನೋದ್, ಪರಶುರಾಮ, ಬಸವರಾಜ, ಶರಣಪ್ಪ, ವೆಂಕಟೇಶ್, ಯಮನೂರಿ, ಹನುಮಂತ ಸೇರಿದಂತೆ 22 ಮಂದಿಯ ವಿರುದ್ಧ ಸಂತ್ರಸ್ತ ಕುಟುಂಬ ದೂರು ನೀಡಿದೆ. ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು, ಗಾಯಾಳುಗಳಿಂದ ಹೇಳಿಕೆ ಪಡೆದಿದ್ದಾರೆ.
ಮಹಿಳೆಯ ಮೇಲೂ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.