ಮಂಗಳೂರು: ಕಮ್ಯುನಿಸ್ಟ್ ಚಳುವಳಿಯ ಹಿರಿಯ ನೇತಾರರೂ, ದುಡಿಯುವ ವರ್ಗದ ಕಣ್ಮಣಿ, CPIM ಗುರುಪುರ ವಲಯ ಸಮಿತಿ ಸದಸ್ಯರಾದ ಕಾಂ.ಗಂಗಯ್ಯ ಅಮೀನ್(73ವರ್ಷ) ರವರು ದೀರ್ಘಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ.
ಎಳೆಯ ಪ್ರಾಯದಲ್ಲೇ ದುಡಿಯುವ ವರ್ಗದ ಚಳುವಳಿಯ ಸಂಪರ್ಕಕ್ಕೆ ಬಂದ ಗಂಗಯ್ಯ ಅಮೀನ್ ರವರು, ಸ್ವತಃ ಹೆಂಚು ಕಾರ್ಖಾನೆಯ ಕಾರ್ಮಿಕನಾಗಿ, ಹೆಂಚು ಕಾರ್ಮಿಕರ ಚಳುವಳಿಯ ನಾಯಕರಾಗಿ ಹಲವಾರು ವರ್ಷಗಳ ಕಾಲ ದುಡಿದರು. ಉಳುವವನೇ ಹೊಲದೊಡೆಯ ಕಾನೂನಿನ ಜಾರಿಯ ಹೋರಾಟದಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡ ಗಂಗಯ್ಯರವರು, ವಾಮಂಜೂರು ಆಸುಪಾಸಿನ ಗ್ರಾಮಗಳಲ್ಲಿ ರೈತರಿಗೆ ಭೂಮಿ ಸಿಗುವ ಹೋರಾಟದಲ್ಲಿ ಸಕ್ರಿಯ ಪಾತ್ರವಹಿಸಿದ್ದರು.
ವಾಮಂಜೂರು ಭೂಮಾಲಕರ ವಿರುದ್ಧ ಜನತೆಯನ್ನು ಕೆಂಬಾವುಟದಡಿಯಲ್ಲಿ ಸಂಘಟಿಸಲು ಪೂರಕವಾಗುವಂತೆ ಜೈ ಶಂಕರ್ ಮಿತ್ರ ಮಂಡಳಿಯಲ್ಲಿ ಎಂಬ ಸ್ಥಳೀಯ ಸಂಸ್ಥೆಯನ್ನು ಸ್ಥಾಪಿಸಿ,ಯುವಜನತೆಯ ಪ್ರೀತಿ ವಿಶ್ವಾಸವನ್ನು ಗಳಿಸುವ ಮೂಲಕ ಆ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದ ಹಿರಿಮೆ ಗಂಗಯ್ಯರವರದ್ದು.ಊರಿನ ಜನತೆಯ ಅಪಾರ ಬೆಂಬಲ ಗಳಿಸಿದ ಗಂಗಯ್ಯರವರು, ಸಿಪಿಐಎಂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಒಂದು ಬಾರಿ ಮಂಡಲ ಪಂಚಾಯತ್ ಮತ್ತು ಎರಡುಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ ಚುನಾಯಿತರಾಗಿ ತಿರುವೈಲು ಗ್ರಾಮದ ಅಭಿವೃದ್ಧಿಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಜನನಾಯಕರಾಗಿದ್ದರು.
ಸಿಐಟಿಯುನ ಜಿಲ್ಲಾ ಮಟ್ಟದ ನಾಯಕರಾಗಿ ಹಲವಾರು ವರ್ಷಗಳ ಕಾಲ ದುಡಿಯುವ ಮೂಲಕ ದುಡಿಯುವ ವರ್ಗದ ಆಶಾಕಿರಣವಾಗಿ ಹೊರಹೊಮ್ಮಿದ್ದು,ಬೀಡಿ ಕಾರ್ಮಿಕರಿಗಾಗಿ ತನ್ನ ಜೀವನದ ಅಪಾರ ಸಮಯವನ್ನು ಮೀಸಲಿಟ್ಟಿದ್ದರು.ಅಂತಹ ಮಾಹಾನ್ ಚೇತನವನ್ನು ಕಳೆದುಕೊಂಡ ಜಿಲ್ಲೆಯ ಕಾರ್ಮಿಕ ವರ್ಗ ಅತ್ಯಂತ ಬಡವಾಗಿದೆ ಎಂದು CPIM ದ.ಕ.ಜಿಲ್ಲಾ ಸಮಿತಿ ತನ್ನ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ತಿಳಿಸಿದೆ.
ಕಾಂ.ಗಂಗಯ್ಯ ಅಮೀನ್ ರವರು ಪತ್ನಿ ಭವಾನಿ(CITU ದ.ಕ.ಜಿಲ್ಲಾ ಸಮಿತಿ ಸದಸ್ಯರು), ಒಂದು ಗಂಡು,ಮೂರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ CPIM, CITU,AIKS, DYFI, SFI, JMS,DHS,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಗಳು ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದೆ.