Home ಟಾಪ್ ಸುದ್ದಿಗಳು ನಾಳೆಯಿಂದ ನಮ್ಮ ಆಟ ಎಂದರೆ ದುಡ್ಡು ಹಂಚುವುದಾ ಸೋಮಣ್ಣನವರೇ?: ಎಚ್ ಡಿ ಕುಮಾರಸ್ವಾಮಿ

ನಾಳೆಯಿಂದ ನಮ್ಮ ಆಟ ಎಂದರೆ ದುಡ್ಡು ಹಂಚುವುದಾ ಸೋಮಣ್ಣನವರೇ?: ಎಚ್ ಡಿ ಕುಮಾರಸ್ವಾಮಿ

ವಿಜಯಪುರ: ಇವತ್ತು ಸಾಯಂಕಾಲದ ತನಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಂಧಗಿಯಲ್ಲಿ ಫ್ರೀ ಆಗಿ ಬಿಟ್ಟುಬಿಟ್ಟಿದ್ದೇವೆ. ನಾಳೆಯಿಂದ ನಮ್ಮ ಆಟ ಶುರುವಾಗುತ್ತದೆ ಎಂದು ಉಪ ಚುನಾವಣೆ ಬಹಿರಂಗ ಪ್ರಚಾರದ ಅಂತ್ಯವಾಗುವುದಕ್ಕೆ ಮೊದಲು ಹೇಳಿಕೆ ನೀಡಿರುವ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು; “ನಾಳೆಯಿಂದ ನಮ್ಮ ಆಟ ಆರಂಭ ಎಂದರೆ ಅರ್ಥವೇನು? ಆಟ ಎಂದರೆ ದುಡ್ಡು ಹಂಚುವುದಾ?” ಎಂದು ಪ್ರಶ್ನಿಸಿದರು.

ನಿಮ್ಮ ಆಟವನ್ನು ಬರೀ ಚುನಾವಣೆಗಷ್ಟೇ ಸೀಮಿತ ಮಾಡಿಕೊಳ್ಳುತ್ತೀರೋ ಅಥವಾ ಸುಳ್ಳು ಹೇಳಿಕೊಂಡು, ಸುಳ್ಳು ಜಾಹೀರಾತುಗಳನ್ನು ಕೊಟ್ಟುಕೊಂಡು ಐದು ಲಕ್ಷ ಮನೆ ಕೊಟ್ಟೆ, ಆರು ಲಕ್ಷ ಮನೆ ಕೊಟ್ಟೆ ಅಂತ ಹೇಳಿಕೊಂಡು ತಿರುಗ್ತೀರೋ? ಎಂದು ಸೋಮಣ್ಣ ಅವರಿಗೆ ಬಿಸಿ ಮುಟ್ಟಿಸಿದರು ಹೆಚ್ಡಿಕೆ.

ಹಿಂದೆ ಐದು ವರ್ಷ ಆಡಳಿತ ನಡೆಸಿದಾಗ ಹಾಗೂ ಈಗ ಎರಡೂವರೆ ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ ಸರಕಾರದಿಂದ ಸಿಂಧಗಿ ಕ್ಷೇತ್ರಕ್ಕೆ ಯಾವುದೇ ಪ್ರಯೋಜನ ಆಗಿಲ್ಲ. ಈ ಕ್ಷೇತ್ರದತ್ತ ಸಚಿವರುಗಳು ತಲೆ ಹಾಕಿ ಮಲಗಿಲ್ಲ. ಆದರೆ, ನಾಳೆಯಿಂದ ಆಟ ಆಡೀವಿ ಎಂದು ಸಚಿವರು ಹೇಳಿರುವುದು ಬಿಜೆಪಿ ಉಪ ಚುನಾವಣೆಗಳನ್ನು ಹೇಗೆ ಗೆಲ್ಲುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು ಅವರು.

ಆಡಿದ್ದೇ ಆಡು ಕಿಸುಬಾಯಿ ದಾಸ; ಸಿದ್ದರಾಮಯ್ಯಗೆ ಟಾಂಗ್

ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ, ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಸಿದ್ದರಾಮಯ್ಯ ಅವರ ಸರಣಿ ಸುಳ್ಳು ಮಾತುಗಳನ್ನು ಕೇಳಿಕೇಳಿ ಮುಸ್ಲಿಮರಿಗೆ ಸಾಕಾಗಿ ಹೋಗಿದೆ. ಅವರಲ್ಲಿ ನಮ್ಮ ಪಕ್ಷದ ಬಗ್ಗೆ ಮಾತನಾಡಲು ಸರಕಿಲ್ಲ, ಜನರ ಮುಂದೆ ಮಾತನಾಡಲು ಅವರಲ್ಲಿ ಏನೂ ಉಳಿದಿಲ್ಲ. ಹೀಗಾಗಿ ಹೇಳಿದ್ದನ್ನೇ ಹೇಳ್ತಿದ್ದಾರೆ. ಗಾದೆ ಮಾತಿನಂತೆ “ಆಡಿದ್ದೇ ಆಡು ಕಿಸುಬಾಯಿ ದಾಸ” ಎನ್ನುವಂತೆ ಆಗಿದೆ ಸಿದ್ದರಾಮಯ್ಯ ಅವರ ಪರಿಸ್ಥಿತಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಜೆಡಿಎಸ್ ಪಕ್ಷಕ್ಕೆ ಜನರ ಒಲವಿದೆ:

ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ದೇವೇಗೌಡರು ಹಾಗೂ ನಾನು ಈ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳನ್ನು ಜನರು ಮರೆತಿಲ್ಲ. ನಿರಂತರವಾಗಿ ದೇವೇಗೌಡರು, ನಾನು, ರೇವಣ್ಣ, ಪ್ರಜ್ವಲ್ ರೇವಣ್ಣ, ನಮ್ಮ ಶಾಸಕರು, ಮುಖಂಡರು ನಿರಂತರವಾಗಿ ಪ್ರಚಾರ ಮಾಡುತ್ತಿದ್ದೇವೆ. ಕ್ಷೇತ್ರದ ಪ್ರತಿ ಗ್ರಾಮಕ್ಕೂ ನಾವು ಭೇಟಿ ನೀಡಿದ್ದೇವೆ. ಬಹಿರಂಗ ಸಭೆಗಳ ಗೊಡವೆಯೇ ಇಲ್ಲದೆಯೇ ನೇರವಾಗಿ ಜನರ ಜತೆಯೇ ಸಂಪರ್ಕ ಸಾಧಿಸಿದ್ದೇವೆ, ಮನೆಗಳ ಜಗಲಿಯಲ್ಲೇ ಸಭೆಗಳನ್ನು ಮಾಡಿದ್ದೇವೆ. ಹೀಗಾಗಿ ಪಕ್ಷಕ್ಕೆ ಅತ್ಯುತ್ತಮ ಬೆಂಬಲ ಸಿಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಕ್ಷೇತ್ರಕ್ಕೆ ನಾವು ನೀಡಿರುವ ನೀರಾವರಿ ಯೋಜನೆಗಳ ಬಗ್ಗೆ ಜನರು ನಿರಂತರವಾಗಿ ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿಯ ಕೊಡುಗೆ ಈ ಕ್ಷೇತ್ರಕ್ಕೆ ಶೂನ್ಯ ಎಂಬುದನ್ನು ಜನರಿಗೆ ಗೊತ್ತಿದೆ ಎಂದು ಅವರು ತಿಳಿಸಿದರು.

Join Whatsapp
Exit mobile version