ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿಯನ್ನು ಬಿಜೆಪಿ ಕೊಲ್ಲಲು ಯತ್ನಿಸುತ್ತಿದೆ ಎಂದು ಆಪ್ ಆರೋಪಿಸಿದ ಬೆನ್ನಲ್ಲೇ ಸಂಸದ ಗೌತಮ್ ಗಂಭೀರ್ ಕೇಜ್ರಿವಾಲ್’ರನ್ನು ಪ್ರಚಾರದ ಮಂತ್ರಿಯೆಂದು ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗಂಭೀರ್, ಹಲೋ ದೆಹಲಿ, ಕಾಶ್ಮೀರಿ ಹಿಂದೂಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ನಾನು ಸಿಕ್ಕಿಬಿದ್ದಿದ್ದೇನೆ. ಈ ಬಗ್ಗೆ ಹಲವಾರು ಸಂದರ್ಶನಗಳನ್ನು ನೀಡಿದ ನಂತರವೂ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈಗ ನನಗಿರುವುದು ಒಂದೇ ದಾರಿ. ನಾನು ಬಲಿಪಶುವಾಗಿದ್ದೇನೆಂದು ತೋರಿಸಿಕೊಳ್ಳುವುದು. ಬಿಜೆಪಿ ನನ್ನನ್ನು ಕೊಲ್ಲಲು ಬಯಸಿದೆ ಎಂದು ಹೇಳಿಕೊಳ್ಳುವುದು. ದಯವಿಟ್ಟು ಈ ಸಂದೇಶವನ್ನು ಹರಡಲು ಸಹಾಯ ಮಾಡಿ. ಇಂತಿ ನಿಮ್ಮ ಪ್ರಚಾರ ಮಂತ್ರಿ(ಅರವಿಂದ್ ಕೇಜ್ರಿವಾಲ್) ಎಂದು ಬರೆದಿದ್ದಾರೆ.
ವಿವಾದಿತ ಬಾಲಿವುಡ್ ಸಿನೆಮಾ ಕಾಶ್ಮೀರ ಫೈಲ್ಸ್ ಕುರಿತು ಕೇಜ್ರಿವಾಲ್ ಹೇಳಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ದೆಹಲಿ ಸಿಎಂ ಮನೆ ಮುಂಭಾಗ ಪ್ರತಿಭಟನೆ ನಡೆಸಿ, ಪೊಲೀಸರ ಸಮ್ಮುಖದಲ್ಲೇ ಬ್ಯಾರಿಕೇಡ್, ಸಿಸಿಟಿವಿ ಗಳನ್ನು ಧ್ವಂಸಗೈದಿದ್ದರು.