Home ಟಾಪ್ ಸುದ್ದಿಗಳು ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಗಾಲಿ ಜನಾರ್ದನ ರೆಡ್ಡಿ

ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಗಾಲಿ ಜನಾರ್ದನ ರೆಡ್ಡಿ

ಬೆಂಗಳೂರು: ಮಾಜಿ ಸಚಿವ ಹಾಗೂ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆ ಮಾಡಿದ್ದು, ತಮ್ಮ ಹೊಸ ಪಕ್ಷಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂದು ಹೆಸರಿಟ್ಟಿದ್ದಾರೆ.

ಬೆಂಗಳೂರಿನ ಬಸವೇಶ್ವರ ಸರ್ಕಲ್​​ ಬಳಿಯ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ದನ ರೆಡ್ಡಿ, ಅಟಲ್​ ಬಿಹಾರಿ ವಾಜಪೇಯಿ ಜನ್ಮ ದಿನವಾದ ಇಂದು ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸ್ಥಾಪನೆ ಮಾಡುತ್ತಿದ್ದೇನೆ. ಜಾತಿ – ಜಾತಿ ನಡುವೆ ರಾಜಕೀಯವನ್ನು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವವರ ನಡುವೆ ನಾನು ಬಸವಣ್ಣರ ತತ್ವವನ್ನು ಪಾಲಿಸಿಕೊಂಡು ಈ ಪಕ್ಷವನ್ನು ಸ್ಥಾಪನೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಬಸವಣ್ಣ ಜಾತಿ ಮತ ಭೇದಗಳನ್ನು ಮರೆತು ಸಮಾಜದಲ್ಲಿ ಜೀವನ ಸಾಗಿಸಬೇಕು ಎಂದು ಹೇಳಿದ್ದರು. ಇದೇ ನಮ್ಮ ಪಕ್ಷದ ಸಿದ್ಧಾಂತವಾಗಿದೆ. ಇದೇ ತತ್ವವನ್ನು ಇಟ್ಟುಕೊಂಡು ನಾನು ರಾಜ್ಯದ ಅಭಿವೃದ್ಧಿಯನ್ನು ಮಾಡಬೇಕು ಎಂದುಕೊಂಡಿದ್ದೇನೆ. ಅನೇಕರು ನಾನು ಹೊಸ ಪಕ್ಷ ಸ್ಥಾಪನೆ ಮಾಡೋದಿಲ್ಲ, ಬಿಜೆಪಿಯೊಂದಿಗೆ ನನ್ನ ಸಂಬಂಧ ಮುಂದುವರಿಯುತ್ತದೆ ಎಂದು ಭಾವಿಸಿದ್ದರು. ಆದರೆ ಇದು ಇಂದು ಹುಸಿಯಾಗಿದೆ. ನನಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನನ್ನದೇ ಆದ ಹೊಸ ಪಕ್ಷದೊಂದಿಗೆ ನಾನು ಸಾರ್ವಜನಿಕ ಜೀವನಕ್ಕೆ ಮರು ಪ್ರವೇಶ ಮಾಡುತ್ತಿದ್ದೇನೆ. ಯಾವುದೇ ಜಾತಿ – ಮತವಿಲ್ಲದ ರಾಜ್ಯವನ್ನು ನಿರ್ಮಾಣ ಮಾಡುವುದೇ ನಮ್ಮ ಗುರಿ ಎಂದು ಹೇಳಿದ್ದಾರೆ.

  ಆಪ್ತ ಗೆಳೆಯ ಶ್ರೀರಾಮುಲು ಅವರಿಗೆ ನನ್ನ ಪಕ್ಷಕ್ಕೆ ಬರುವಂತೆ ಹೇಳಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಮುಂದಿನ ದಿನಗಳಲ್ಲಿ ನನ್ನ ಪತ್ನಿ ಅರುಣಾ ಲಕ್ಷ್ಮಿ ಅವರು ಸಹ ಪಕ್ಷ ಸಂಘಟನೆಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಏನೇ ಅಡೆತಡೆ ಬಂದರೂ ಮುನ್ನಡೆಯುವೆ. ಕರ್ನಾಟಕ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ ಎಂದು ಜನಾರ್ದನ ರೆಡ್ಡಿ ಹೇಳಿದರು.

Join Whatsapp
Exit mobile version