Home ಕರಾವಳಿ ಕೆ.ಎಂ.ಶರೀಫ್ ಸ್ಮಾರಕ ಪ್ರಶಸ್ತಿ’ಗೆ ಹಿರಿಯ ಚಿಂತಕ ಜಿ.ರಾಜಶೇಖರ್ ಆಯ್ಕೆ

ಕೆ.ಎಂ.ಶರೀಫ್ ಸ್ಮಾರಕ ಪ್ರಶಸ್ತಿ’ಗೆ ಹಿರಿಯ ಚಿಂತಕ ಜಿ.ರಾಜಶೇಖರ್ ಆಯ್ಕೆ

ಮಂಗಳೂರು: ಪ್ರಸ್ತುತ ಪಾಕ್ಷಿಕದ ಪ್ರಥಮ ಸಂಪಾದಕರಾಗಿದ್ದ ದಿವಂಗತ ಕೆ.ಎಂ.ಶರೀಫ್ ಅವರ ಸ್ಮರಣಾರ್ಥ ಪ್ರಸ್ತುತ ಪಾಕ್ಷಿಕದ ವತಿಯಿಂದ ನೀಡಲು ತೀರ್ಮಾನಿಸಲಾಗಿರುವ ವಾರ್ಷಿಕ ಪ್ರಶಸ್ತಿ “ಕೆ.ಎಂ.ಶರೀಫ್ ಸ್ಮಾರಕ ಪ್ರಶಸ್ತಿ-2021”ಗೆ ಹಿರಿಯ ಚಿಂತಕ ಜಿ.ರಾಜಶೇಖರ್  ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಫೆ.22ರಂದು ಮಂಗಳೂರಿನ ಶಾಂತಿನಿಲಯದಲ್ಲಿ ನಡೆಯಲಿದೆ ಎಂದು ಪ್ರಸ್ತುತ ಪಾಕ್ಷಿಕ ಪ್ರಧಾನ ಸಂಪಾದಕ ಅಬ್ದುಲ್ ರಝಾಕ್ ಕೆಮ್ಮಾರ ತಿಳಿಸಿದ್ದಾರೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಂ.ಶರೀಫ್ ಅವರು ಪ್ರಸ್ತುತ ಪಾಕ್ಷಿಕದ ಪ್ರಾರಂಭ ಕಾಲದಿಂದ ತಮ್ಮ ನಿಧನದ ವರೆಗೂ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಮಾತ್ರವಲ್ಲ, ಕಳೆದ ಮೂರು ದಶಕಗಳಿಂದ ದೇಶದ ಉದ್ದಗಲಕ್ಕೂ ಸಂಚರಿಸಿ ಶೋಷಿತ ಸಮುದಾಯಗಳ ಸಬಲೀಕರಣಕ್ಕಾಗಿ ಅಹರ್ನಿಶಿ ದುಡಿದಿದ್ದರು. ಸಮಕಾಲೀನ ಸಮಸ್ಯೆಗಳಿಗೆ ಅವರು ತಮ್ಮ ತರ್ಕಬದ್ಧ ವಿಚಾರಗಳ ಮೂಲಕ ಸ್ಪಂದಿಸುತ್ತಿದ್ದರು. ಈ ಮೂಲಕ ಅವರು ಏಕ ಕಾಲದಲ್ಲಿ ಸಾಮಾಜಿಕ ಹೋರಾಟಗಾರರರಾಗಿ, ಪತ್ರಿಕೋದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಕೆ.ಎಂ.ಶರೀಫ್ ಅವರು 2020ರ ಡಿಸೆಂಬರ್ 22ರಂದು ನಿಧನರಾಗಿದ್ದಾರೆ. ಇವರ ಸ್ಮರಣಾರ್ಥ ವರ್ಷಂಪ್ರತಿ ಪತ್ರಿಕೋದ್ಯಮ, ಹೋರಾಟ ಮತ್ತು ಸಮಾಜ ಸೇವೆ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

2021ನೇ ಸಾಲಿನ ಪ್ರಶಸ್ತಿಗೆ ಹಿರಿಯ ಚಿಂತಕ, ಬರಹಗಾರ, ಹೋರಾಟಗಾರ ಜಿ.ರಾಜಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಖರ ಚಿಂತಕರಾಗಿರುವ ಜಿ.ರಾಜಶೇಖರ್ ಅವರು, ತೀಕ್ಷ್ಣ ಸಾಹಿತ್ಯ ವಿಮರ್ಶೆಗಳಿಗೆ ಹೆಸರಾದವರು ಮತ್ತು ಕರ್ನಾಟಕ ಜನಪರ ಚಳವಳಿಗಳಲ್ಲಿ ಸದಾ ತೊಡಗಿಸಿಕೊಂಡು ನ್ಯಾಯ, ಸತ್ಯದ ಉಳಿವಿಗಾಗಿ ಹೋರಾಟದಲ್ಲಿ ನಿರತರಾಗಿದ್ದವರು. ಸಮಕಾಲೀನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ವಿದ್ಯಮಾನಗಳನ್ನು ಆಳವಾಗಿ ಗ್ರಹಿಸಿಕೊಂಡು ಅದಕ್ಕೆ ಬರಹದ ಮೂಲಕ ಪ್ರತಿಸ್ಪಂದಿಸುತ್ತಿದ್ದರು. ಸಾಹಿತ್ಯ, ಸತ್ಯಶೋಧನೆ ಮತ್ತು ಸಾಮಾಜಿಕ ಹಾಗೂ ಮಾನವ ಹಕ್ಕುಗಳ ಪರವಾದ ಹೋರಾಟಗಳಲ್ಲಿ ಭಾಗಿಯಾಗಿ ತನ್ನದೇ ಆದ ಕೊಡುಗೆ ನೀಡಿದ ಇವರು ಈ ನಾಡು ಕಂಡ ಅಪರೂಪದ ವ್ಯಕ್ತಿತ್ವವಾಗಿದ್ದಾರೆ ಎಂದು ಅಬ್ದುಲ್ ರಝಾಕ್ ತಿಳಿಸಿದರು.

ಕೆ.ಎಂ.ಶರೀಫ್ ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 22ರಂದು ಮಧ್ಯಾಹ್ನ 3ಗಂಟೆಗೆ ಮಂಗಳೂರಿನ ಶಾಂತಿ ನಿಲಯ ಸಭಾಂಗಣದಲ್ಲಿ ನಡೆಯಲಿದೆ. ಇದೇ ವೇಳೆ “ಅಭಿವ್ಯಕ್ತಿ ಸ್ವಾತಂತ್ರ್ಯ: ಫ್ಯಾಶಿಸಂ ಒಡ್ಡುತ್ತಿರುವ ಸವಾಲುಗಳು” ಎಂಬ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಹಿರಿಯ ಅಂಕಣಕಾರರಾದ ನಾ.ದಿವಾಕರ, ದ್ರಾವಿಡ ಚಳವಳಿ ಹೋರಾಟಗಾರ ಅಭಿ ಗೌಡ, ಪ್ರಸ್ತುತ ಸಂಪಾದಕೀಯ ಮಂಡಳಿಯ ಸದಸ್ಯರಾದ ಶಾಹಿದಾ ಅಸ್ಲಮ್, ಇಲ್ಯಾಸ್ ಮುಹಮ್ಮದ್ ತುಂಬೆ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ಬಳಿಕ ಹಿರಿಯ ಚಿಂತಕ ಜಿ.ರಾಜಶೇಖರ್ ಅವರಿಗೆ ಕೆ.ಎಂ.ಶರೀಫ್ ಸ್ಮಾರಕ ಪ್ರಶಸ್ತಿ ಪ್ರದಾನ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸ್ತುತ ಪಾಕ್ಷಿಕದ ಪ್ರಧಾನ ಸಂಪಾದಕ ಅಬ್ದುಲ್ ರಝಾಕ್ ಕೆಮ್ಮಾರ ವಹಿಸಲಿದ್ದಾರೆ. ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಬ್ದುಲ್ ರಝಾಕ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ  ಪ್ರಸ್ತುತ ಪಾಕ್ಷಿಕ ಸಂಪಾದಕ ಅಬ್ದುಲ್ ಹಮೀದ್ ಎಸ್.ಕೆ.,  ಸಂಪಾದಕೀಯ ಮಂಡಳಿ ಸದಸ್ಯರಾದ ಝಿಯಾವುಲ್ ಹಖ್ ಎಚ್. , ಶಾಹಿದಾ ಎ. ಉಪಸ್ಥಿತರಿದ್ದರು.

Join Whatsapp
Exit mobile version