ನವದೆಹಲಿ: ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮವನ್ನು ಉತ್ತೇಜಿಸುವ ಸಲುವಾಗಿ 2025ರ ವೇಳೆ ಸುಮಾರು 20,000 ಭಾರತೀಯ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸೇರಿಸುವ ಗುರಿಯನ್ನು ಫ್ರಾನ್ಸ್ ಹೊಂದಿದೆ ಎಂದು ವಿದೇಶಾಂಗ ಸಚಿವೆ ಕ್ಯಾಥರೀನ್ ಕೊಲೊನ್ನಾ ಅವರು ತಿಳಿಸಿದ್ದಾರೆ.
ಶ್ರೀ ರಾಮ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರಿಂದ ಜನರಿಗೆ ಸಂಪರ್ಕ ಪಡೆಯುವುದು ಅತ್ಯಗತ್ಯ. 2025ರ ವೇಳೆಗೆ ನಾವು ಪ್ರಾನ್ಸ್’ನಲ್ಲಿ 20,000 ಭಾರತೀಯ ವಿದ್ಯಾರ್ಥಿಗಳನ್ನು ತಲುಪಲು ಬಯಸುತ್ತೇವೆ. ಈ ಸಂಬಂಧ ನಾವು ಈಗಾಗಲೇ 5000 ಜನರನ್ನು ತಲುಪಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತಕ್ಕೆ ತನ್ನ ಮೊದಲ ಅಧಿಕೃತ ಬೇಟಿಯಲ್ಲಿ ಕೊಲೊನ್ನಾ, ಎರಡು ರಾಷ್ಟ್ರಗಳ ನಡುವಿನ ವಿದ್ಯಾರ್ಥಿಗಳ ಚಲನಶೀಲತೆಯನ್ನು ಒತ್ತಿ ಹೇಳಿದ್ದಾರೆ. ಅಕ್ಟೋಬರ್ 1, 2021 ರಿಂದ ಜಾರಿಗೆ ಬಂದ ವಲಸೆ ಮತ್ತು ಚಲನಶೀಲತೆಯ ಪಾಲುದಾರಿಕೆ ಒಪ್ಪಂದವನ್ನು ಅನುಷ್ಹಾನಗೊಳಿಸುವಲ್ಲಿ ಭಾರತ ಮತ್ತು ಫ್ರಾನ್ಸ್ ಬದ್ಧವಾಗಿವೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಪ್ರಾದೇಶಿಕ ಮತ್ತು ಜಾಗತಿಕ ಭದ್ರತಾ ವಿಷಯ, ರಕ್ಷಣಾ ಸಹಕಾರದ ಬಲಪಡಿಸುವಿಕೆ ಮತ್ತು ಭಾರತದೊಂದಿಗೆ ಫ್ರಾನ್ಸ್’ನ ಭಯೋತ್ಪಾದನಾ ನಿಗ್ರಹ ಸಹಕಾರದ ಅನುಷ್ಠಾನದ ಕುರಿತು ಚರ್ಚೆ ನಡೆಸಲು ಫ್ರೆಂಚ್ ವಿದೇಶಾಂಗ ವ್ಯವಹಾರಗಳ ಸಚಿವೆ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಲಿದ್ದಾರೆ.