Home ಕ್ರೀಡೆ ಫಿಫಾ ವಿಶ್ವಕಪ್| ಫೈನಲ್‌ಗೆ ಫ್ರಾನ್ಸ್; ಮೊರಕ್ಕೊ ಹೋರಾಟ ಸೆಮಿಫೈನಲ್‌ನಲ್ಲಿ ಅಂತ್ಯ

ಫಿಫಾ ವಿಶ್ವಕಪ್| ಫೈನಲ್‌ಗೆ ಫ್ರಾನ್ಸ್; ಮೊರಕ್ಕೊ ಹೋರಾಟ ಸೆಮಿಫೈನಲ್‌ನಲ್ಲಿ ಅಂತ್ಯ

ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದ ಮೊರಕ್ಕೊ ಹೋರಾಟ, ಸೆಮಿ ಫೈನಲ್ ನಲ್ಲಿ ಅಂತ್ಯವಾಗಿದೆ.

ಅಲ್ ಬೈತ್ ಸ್ಟೇಡಿಯಂನಲ್ಲಿ ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್, 2-0 ಗೋಲುಗಳ ಅಂತರದಲ್ಲಿ ಮೊರಕ್ಕೊ ತಂಡವನ್ನು ಮಣಿಸಿ, ಸತತವಾಗಿ ಎರಡನೇ ಬಾರಿಗೆ ಪ್ರತಿಷ್ಠಿತ ಟೂರ್ನಿಯ ಫೈನಲ್ ಪ್ರವೇಶಿಸಿದೆ.

ಲುಸೈಲ್ ಸ್ಟೇಡಿಯಂನಲ್ಲಿ ಭಾನುವಾರ ಚಾಂಪಿಯನ್ ಪಟ್ಟಕ್ಕಾಗಿ ನಡೆಯುವ ಹೋರಾಟದಲ್ಲಿ ಫ್ರಾನ್ಸ್, ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ಮೊರಕ್ಕೊ ವಿರುದ್ಧದ ಗೆಲುವಿನೊಂದಿಗೆ ಫ್ರಾನ್ಸ್, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 7 ಸೆಮಿಫೈನಲ್ ಪಂದ್ಯಗಳಲ್ಲಿ 4ನೇ‌ ಬಾರಿ ಫೈನಲ್ ತಲುಪಿದಂತಾಗಿದೆ. ಇದಕ್ಕೂ ಮೊದಲು 1998, 2006 ಹಾಗೂ 2018ರಲ್ಲಿ ಫ್ರಾನ್ಸ್ ಫೈನಲ್ ಫೈಟ್ ನಲ್ಲಿ ಕಾಣಿಸಿಕೊಂಡಿದೆ.

ಶನಿವಾರ ಮೂರನೇ ಸ್ಥಾನಕ್ಕಾಗಿ ನಡೆಯುವ ಪಂದ್ಯದಲ್ಲಿ ಮೊರಕ್ಕೊ, ಕ್ರೊವೇಷಿಯಾ ತಂಡವನ್ನು ಎದುರಿಸಲಿದೆ.

ಪಂದ್ಯದ ವಿವರ
ತೀವ್ರ ಕುತೂಹಲ ಕೆರಳಿಸಿದ್ದ ಎರಡನೇ ಸೆಮಿಫೈನಲ್ ಆರಂಭವಾಗಿ ಐದು ನಿಮಿಷ ಕಳೆಯುವಷ್ಟರಲ್ಲಿಯೇ ಫ್ರಾನ್ಸ್, ಗೋಲು ಬಲೆಯನ್ನು ಭೇದಿಸಲು ಯಶಸ್ವಿಯಾಗಿತ್ತು.
ಎಂಬಾಪೆ ಹೊಡೆತ ಡಿಫ್ಲೆಕ್ಷನ್ ಆಗಿ ದೊರಕಿದ ಅವಕಾಶವನ್ನು ಥಿಯೋ ಹೆರ್ನಾಂಡೆಸ್ ಗೋಲಾಗಿ ಪರಿವರ್ತಿಸಿದರು.

ಇದಾದ ಬಳಿಕ 2ನೇ ಗೋಲ್’ಗಾಗಿ ಫ್ರಾನ್ಸ್ 79ನೇ ನಿಮಿಷದವರೆಗೆ ಕಾಯಬೇಕಾಯಿತು.
ಉಸ್ಮಾನ್ ಡೆಂಬಲೆ ಬದಲಿ ಆಟಗಾರನಾಗಿ ಬಂದ ಕೊಲೊ ಮೌಮಿ, ಮೈದಾನಕ್ಕಿಳಿದ 44ನೇ ಸೆಕೆಂಡ್’ನಲ್ಲೇ ಎಂಬಾಪೆಯ ಮತ್ತೊಂದು ಡಿಫ್ಲೆಕ್ಷನ್ ಪಾಸ್ ಪಡೆದು ಗೋಲು ದಾಖಲಿಸಿದರು.

45ನೇ ನಿಮಿಷದಲ್ಲಿ ಮೊರಕ್ಕೊದ ಯಾಮಿಕ್, ಅಮೋಘವಾದ ಓವರ್ ಹೆಡ್ ಕಿಕ್ ಮೂಲಕ ಗೋಲು ಗಳಿಸಲು ಯತ್ನಿಸಿದರು. ಆದರೆ ಗೋಲು ಪೆಟ್ಟಿಗೆಯ ಎಡಭಾಗದ ಅಂಚಿಗೆ ಜಿಗಿದ ಫ್ರಾನ್ಸ್ ಗೋಲ್ ಕೀಪರ್ ಹ್ಯೋಗೋ ಲಾರಿಸ್, ಯಾಮಿಕ್ ಪ್ರಯತ್ನವನ್ನು ವಿಫಲಗೊಳಿಸಿದರು.

90+4ನೇ‌ ನಿಮಿಷದಲ್ಲೂ ಔನಹಿ ಏಕಾಂಗಿಯಾಗಿ ಫ್ರಾನ್ಸ್ ಗೋಲು ಬಲೆಯನ್ನು ಗುರಿಯಾಗಿಸಿ ಚೆಂಡಿನ ಜೊತೆ ಮುನ್ನುಗ್ಗಿದ್ದರು. ಇನ್ನೇನು ಗೋಲಿ ದಾಖಲಾಯಿತು ಎನ್ನುವಷ್ಟರಲ್ಲಿ ಫ್ರಾನ್ಸ್‌ನ ವರಾನೆ ಚೆಂಡನ್ನು ಕ್ಲೀಯರ್ ಮಾಡುವಲ್ಲಿ ಯಶಸ್ವಿಯಾದರು.

Join Whatsapp
Exit mobile version