Home ಟಾಪ್ ಸುದ್ದಿಗಳು ವಿದ್ಯುತ್ ತಗುಲಿ‌ ಇಬ್ಬರು ಮಕ್ಕಳು ಸೇರಿ ನಾಲ್ವರು ದಾರುಣ ಸಾವು

ವಿದ್ಯುತ್ ತಗುಲಿ‌ ಇಬ್ಬರು ಮಕ್ಕಳು ಸೇರಿ ನಾಲ್ವರು ದಾರುಣ ಸಾವು

ಕಾಮರೆಡ್ಡಿ(ತೆಲಂಗಾಣ): ವಿದ್ಯುತ್ ತಗುಲಿ‌ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಹೃದಯವಿದ್ರಾವಕ  ಘಟನೆ ಬೀಡಿ ವರ್ಕರ್ಸ್​ ಕಾಲೋನಿಯಲ್ಲಿ ನಡೆದಿದೆ.

ಬೀಡಿ ವರ್ಕರ್ಸ್​ ಆಟೋ ಚಾಲಕ ಅಹಮದ್ (35), ಪತ್ನಿ ಪರ್ವೀನ್ (30), ಮಗಳು ಮಹಿಮ್ (6), ಮಗ ಅದ್ನಾನ್ (3) ಮೃತಪಟ್ಟವರು.

ದುರ್ಘಟನೆಯಲ್ಲಿ ಅದೃಷ್ಟವಶಾತ್ ಮತ್ತೊಬ್ಬ ಮಗ ಫೈಜಾನ್ (5) ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಆಟೋ ಚಾಲಕ ಅಹಮದ್ ಕುಟುಂಬದ ಜೊತೆಗೆ ಸಣ್ಣ ಹುಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದರು. ಮಳೆ ಕಾರಣಕ್ಕೆ ನಿನ್ನೆ ಶಾಲೆಗೆ ರಜೆ ನೀಡಲಾಗಿತ್ತು. ಫೈಜಾನ್​ನನ್ನು ಅಜ್ಜಿ ಮನೆಯಲ್ಲಿ ಬಿಟ್ಟು, ಉಳಿದವರು ಮನೆಯಲ್ಲಿದ್ದರು. ಮನೆಗೋಡೆಗೆ ಕಟ್ಟಿದ್ದ ಕಬ್ಬಿಣದ ತಂತಿ ಮೇಲೆ ಬಟ್ಟೆ ಒಣಗಿಸುತ್ತಿದ್ದಾಗ ಪರ್ವೀನ್​ಗೆ ವಿದ್ಯುತ್ ಸ್ಪರ್ಶಿಸಿದೆ. ಕೂಡಲೇ ಆಕೆಯನ್ನು ರಕ್ಷಿಸಲು ಧಾವಿಸಿದ ಅಹಮದ್‌ಗೂ ಶಾಕ್ ಹೊಡೆದಿದೆ. ತಂದೆ-ತಾಯಿ ಕುಸಿದು ಬೀಳುವುದನ್ನು ಕಂಡ ಮಗಳು ಮಹೀಮ್ ಮತ್ತು ಮಗ ಅದ್ನಾನ್​ ಇಬ್ಬರು ಜೋರಾಗಿ ಕಿರುಚುತ್ತಾ ಪೋಷಕರ ಬಳಿ ಹೋಗಿದ್ದಾರೆ. ಆಗ ಅವರಿಗೂ ವಿದ್ಯುತ್ ಸ್ಪರ್ಶಿಸಿದೆ. ಹೀಗೆ ಒಬ್ಬರ ಬಳಿಕ ಮತ್ತೊಬ್ಬರಂತೆ ವಿದ್ಯುತ್​ ತಗಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು.

ಮಕ್ಕಳ ಆಕ್ರಂದನ ಕೇಳಿದ ಅಕ್ಕಪಕ್ಕದ ಮನೆಯವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿ, ನಾಲ್ವರ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿದ್ದರು. ಅಷ್ಟರಲ್ಲಿ ಅವರೆಲ್ಲರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.ಪರ್ವೀನ್ ತಂದೆ ಹಕೀಂ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೃತರ ಕುಟುಂಬಕ್ಕೆ ಸರ್ಕಾರ 3 ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದು ಸಚಿವ ವೇಮುಲ ಪ್ರಶಾಂತ್ ರೆಡ್ಡಿ ತಿಳಿಸಿದ್ದಾರೆ.

ತಂದೆ-ತಾಯಿ, ಅಕ್ಕ-ತಮ್ಮನನ್ನು ಕಳೆದುಕೊಂಡು ಅನಾಥವಾಗಿರುವ ಪುತ್ರ ಫೈಜಾನ್​ನ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಸಚಿವರು ಭರವಸೆ ಕೊಟ್ಟಿದ್ದಾರೆ.

Join Whatsapp
Exit mobile version