ನೋಯ್ಡಾ: ಗೋಡೆ ಕುಸಿದು ನಾಲ್ವರು ಮೃತಪಟ್ಟಿರುವ ಘಟನೆ ನೋಯ್ಡಾ ದ ಸೆಕ್ಟರ್ 21ರಲ್ಲಿರುವ ವಸತಿ ಸಮುಚ್ಚಯದಲ್ಲಿ ನಡೆದಿದೆ.
ನೋಯ್ಡಾದ ಸೆಕ್ಟರ್ 21 ರಲ್ಲಿರುವ ಜಲ ವಾಯು ವಿಹಾರ್ ಸೊಸೈಟಿಯ ಗಡಿ ಗೋಡೆ ಮಂಗಳವಾರ ಬೆಳಿಗ್ಗೆ ಕುಸಿದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಗೊಂಡ 9 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಜಲ ವಾಯು ವಿಹಾರ್ ಬಳಿ ನಡೆಯುತ್ತಿರುವ ಒಳಚರಂಡಿ ದುರಸ್ತಿ ಕಾರ್ಯವು ಗೋಡೆ ಕುಸಿತಕ್ಕೆ ಕಾರಣವಾಗಿರಬಹುದು ಎಂದು ನೋಯ್ಡಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಹಾಸ್ ಎಲ್ವೈ ಮಾಹಿತಿ ನೀಡಿದ್ದಾರೆ.
ಚರಂಡಿ ಸ್ವಚ್ಛಗೊಳಿಸುವಿಕೆಯನ್ನು ನೋಯ್ಡಾ ಪ್ರಾಧಿಕಾರವು ನಡೆಸಿತು. ಮತ್ತು ಅದರ ನಿರ್ವಹಣೆಗೆ 13 ಜನರನ್ನು ನಿಯೋಜಿಸಲಾಗಿತ್ತು ಎಂದು ಸೊಸೈಟಿಯ ಕಾವಲುಗಾರರೊಬ್ಬರು ತಿಳಿಸಿದ್ದಾರೆ.
ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಇಲ್ಲಿಯವರೆಗೆ ಒಂಬತ್ತು ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ, ಜಲ ವಾಯು ವಿಹಾರ್ ಬಳಿಯ ಪ್ರದೇಶಗಳನ್ನು ಪ್ರಸ್ತುತ ಶೋಧಿಸಲಾಗುತ್ತಿದೆ. ರಕ್ಷಣಾ ಮತ್ತು ಅಗ್ನಿಶಾಮಕ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸುಹಾಸ್ ಎಲ್ವೈ ಹೇಳಿದ್ದಾರೆ.
ಗೋಡೆ ಕುಸಿತಕ್ಕೆ ಕಾರಣವನ್ನು ಪತ್ತೆ ಹಚ್ಚಲು ವಿವರವಾದ ತನಿಖೆ ನಡೆಸಲಾಗುವುದು ಎಂದು ನೋಯ್ಡಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರು.
ಎಫ್ ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ನೋಯ್ಡಾದ ಪೊಲೀಸ್ ಆಯುಕ್ತ ಅಲೋಕ್ ಸಿಂಗ್ ತಿಳಿಸಿದ್ದಾರೆ.