Home ಟಾಪ್ ಸುದ್ದಿಗಳು ಕಲುಷಿತ ನೀರು ಸೇವನೆ: ವಿಜಯನಗರ, ತುಮಕೂರಿನಲ್ಲಿ ಒಟ್ಟು ನಾಲ್ವರ ಸಾವು

ಕಲುಷಿತ ನೀರು ಸೇವನೆ: ವಿಜಯನಗರ, ತುಮಕೂರಿನಲ್ಲಿ ಒಟ್ಟು ನಾಲ್ವರ ಸಾವು

ವಿಜಯನಗರ: ಕಳೆದ ಐದು ದಿನಗಳಲ್ಲಿ ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕಲುಷಿತ ನೀರು ಕುಡಿದು ನಾಲ್ವರು ಸಾವನ್ನಪ್ಪಿದ್ದು ಹಲವು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಮೃತರನ್ನು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸೋರಲಮಾವು ಗ್ರಾಮದ ಗುಂಡಮ್ಮ (60) ಮತ್ತು ಭುವನೇಶ್ವರಿ (10) ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ತೆಲಗಿ ಸಮೀಪದ ತುಂಬಿಗೇರಿಯ ಭೋವಿ ಸುರೇಶ್ (34) ಮತ್ತು ಭೋವಿ ಮಹಾಂತೇಶ್ (45) ಎಂದು ಗುರುತಿಸಲಾಗಿದೆ.


ಸುರೇಶ್ ಮತ್ತು ಮಹಾಂತೇಶ್ ದಾವಣಗೆರೆ ಮತ್ತು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಹತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ರತ್ನಮ್ಮ ಅವರ ಪರಿಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಹಾಸನದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗ್ರಾಮದಲ್ಲಿರುವ ಮಿನಿ ನೀರಿನ ಟ್ಯಾಂಕ್ನಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದೇ ನೀರು ಕುಡಿದು ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.


ಇಂತಹ ಘಟನೆಗಳು ಪದೇ ಪದೇ ಸಂಭವಿಸುತ್ತಿದ್ದರೂ ಜಿಲ್ಲಾ ಆಡಳಿತ ಎಚ್ಚೆತ್ತುಕೊಂಡು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಘಟನೆ ನಡೆದ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುಮ್ಮನಾಗುತ್ತಾರೆ. ಜನರು ಜೀವ ಕಾಪಾಡುವತ್ತ ಹೆಜ್ಜೆ ಇಡುತ್ತಿಲ್ಲ. ಪ್ರಾಣ ಹೋದ ಮೇಲೆ ಬಂದು ಏನು ಮಾಡುತ್ತಾರೆ’ ಎಂದು ಸೋರಲಮಾವು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವಾರಗಳಲ್ಲಿ ಕುಡಿಯುವ ನೀರು ಕಲುಷಿತಗೊಂಡ ಹಿನ್ನಲೆಯಲ್ಲಿ 15 ಜನರನ್ನು ವಿಜಯನಗರ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಹರಪನಹಳ್ಳಿಯಲ್ಲಿ ಹಾಳಾದ ಪೈಪ್ಲೈನ್ ಗೆ ಗಲೀಜು ನೀರು ಸೇರಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ಹರಪನಹಳ್ಳಿಯಲ್ಲಿ ನೀರು ಕಲುಷಿತಗೊಂಡಿರುವ ಕುರುಹುಗಳಿವೆ. ನಾವು ವರದಿಗಾಗಿ ಕಾಯುತ್ತಿದ್ದೇವೆ. ಹರಪನಹಳ್ಳಿಗೆ ವೈದ್ಯಕೀಯ ತಂಡವನ್ನು ಕಳುಹಿಸಲಾಗಿದೆ’ ಎಂದು ಸ್ಥಳೀಯ ಆರೋಗ್ಯಾಧಿಕಾರಿಯೊಬ್ಬರು ತಿಳಿಸಿದರು.

Join Whatsapp
Exit mobile version