Home ಟಾಪ್ ಸುದ್ದಿಗಳು ಶಾಲಾ ಕಟ್ಟಡದ ಮೇಲಿನಿಂದ ಬೃಹತ್ ಬಲೂನ್ ನೆಲಕ್ಕಪ್ಪಳಿಸಿ 5 ಮಕ್ಕಳ ದಾರುಣ ಸಾವು

ಶಾಲಾ ಕಟ್ಟಡದ ಮೇಲಿನಿಂದ ಬೃಹತ್ ಬಲೂನ್ ನೆಲಕ್ಕಪ್ಪಳಿಸಿ 5 ಮಕ್ಕಳ ದಾರುಣ ಸಾವು

ಸಿಡ್ನಿ: ಕೋಟೆ ಆಕೃತಿಯ ಗಾಳಿ ತುಂಬಿದ ಬಲೂನ್’ನಲ್ಲಿ ಮಕ್ಕಳು ಆಟವಾಡುತ್ತಿದ್ದ  ವೇಳೆ ರಭಸವಾಗಿ ಗಾಳಿ ಬೀಸಿದ ಪರಿಣಾಮ ಬಲೂನ್ ಜೊತೆಗೆ 33 ಅಡಿ ಎತ್ತರದಿಂದ 5 ಮಕ್ಕಳು ನೆಲಕ್ಕೆ ಬಿದ್ದು ಮೃತಪಟ್ಟ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ತಾಸ್ಮೇನಿಯಾ ರಾಜ್ಯದ ಡೆವೊನ್’ಪೋರ್ಟ್ ಎಂಬಲ್ಲಿರುವ ಹಿಲ್’ಕ್ರೆಸ್ಟ್ ಪ್ರಾಥಮಿಕ ಶಾಲೆಯಲ್ಲಿ ದುರ್ಘಟನೆ ನಡೆದಿದ್ದು, 10 ರಿಂದ 11 ವರ್ಷದ ಪ್ರಾಯದ ಇಬ್ಬರು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳು ಮೃತಪಟ್ಟಿದ್ದು, ನಾಲ್ಕು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಶಾಲಾ ಅಧಿಕೃತರು ಹೇಳಿದ್ದಾರೆ.  

ಪ್ರಾಥಮಿಕ ಶಾಲೆಯ ಶೈಕ್ಷಣಿಕ ವರ್ಷದ ಕೊನೆಯ ದಿನದ ಅಂಗವಾಗಿ ಮಕ್ಕಳಿಗೆ ಮನೋರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಅಮ್ಯೂಸ್’ಮೆಂಟ್ ಪಾರ್ಕ್’ಗಳಲ್ಲಿ ಕಂಡುಬರುವ ಕೋಟೆ ಆಕೃತಿಯ ಗಾಳಿ ತುಂಬಿದ ಬಲೂನ್’ನಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಈ ವೇಳೆ ರಭಸವಾಗಿ ಗಾಳಿ ಬೀಸಿದ ಪರಿಣಾಮ ಶಾಲಾ ಕಟ್ಟಡದ ಮೇಲಿನಿಂದ ಬಲೂನ್ ಹಾರಿ ನೆಲಕ್ಕೆ ಅಪ್ಪಳಿಸಿ ದುರಂತ ಸಂಭವಿಸಿದೆ.

ಘಟನೆಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್, ‘ಸಂತೋಷದ ದಿನ ಪೋಷಕರೆದುರಲ್ಲೇ ಪುಟ್ಟ ಮಕ್ಕಳ ಸಾವು ಸಂಭವಿಸಿರುವುದು ಹೃದಯವಿದ್ರಾವಕ ಎಂದು ನೋವಿನಿಂದ ನುಡಿದಿದ್ದಾರೆ. ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

Join Whatsapp
Exit mobile version