ಕಾರವಾರ: ಮುಂಡಗೋಡ ಕ್ಷೇತ್ರದ ಮಾಜಿ ಶಾಸಕ ವಿ.ಎಸ್. ಪಾಟೀಲ್ ಪುತ್ರ ಬಾಪು ಪಾಟೀಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಎಎಸ್‌ಐ ಬಾಲಕೃಷ್ಣ ಪಾಲೇಕರ್ ಎಂಬವರ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ ಪ್ರಕರಣದಲ್ಲಿ ಬಾಪು ಪಾಟೀಲ್ ಬಂಧನವಾಗಿದ್ದು, ಶಿರಸಿ ಸಬ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಬಾಪು ಗೌಡ ಪಾಟೀಲ್ ವಿರುದ್ಧ ಸೆಕ್ಷನ್ 353, 141,143, 147, 323, 353, 504, 506,149ನಡಿ ಪ್ರಕರಣ ದಾಖಲಾಗಿದೆ.
2011ರಲ್ಲಿ ಮುಂಡಗೋಡ ಅರಣ್ಯ ಇಲಾಖೆಯ ಐಬಿಯಲ್ಲಿ ಕುಡಿದ ಮತ್ತಿನಲ್ಲಿ 15 ಜನರ ಜತೆ ಸೇರಿ ಎಎಸ್‌ಐ ಮೇಲೆ ಹಲ್ಲೆ ನಡೆಸಿದ್ದ ಸಂಬಂಧವಾಗಿ ಬಾಪು ಪಾಟೀಲ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಬಾಪು ಪಾಟೀಲ್ ಹಾಗೂ ಆತನ 15 ಮಂದಿ ಸಹಚರರು ಎಎಸ್‌ಐ ಅವರನ್ನು ದೂಡಿ, ಹಲ್ಲೆ ನಡೆಸಿದ್ದಲ್ಲದೇ, ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ನಡೆಸಿದರ ವಿಚಾರವಾಗಿ ಎಎಸ್‌ಐ ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಾಲಯಕ್ಕೆ ಗೈರು
ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯ ಪ್ರತೀ ಪ್ರಕರಣದಲ್ಲೂ ಮೂರು-ಮೂರು ಬಾರಿ ವಾರೆಂಟ್ ಹೊರಡಿಸಿದ್ದರೂ ಬಾಪು ಪಾಟೀಲ್ ಹಾಜರಾಗಿರಲಿಲ್ಲ. ಕಳೆದ 6 ತಿಂಗಳಿನಿಂದ ನ್ಯಾಯಾಲಯಕ್ಕೆ ಹಾಜರಾಗದೇ ಬೆಂಗಳೂರಿನಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ರಾತ್ರಿ 10 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ನ್ಯಾಯಾಂಗ ಬಂಧನ
ಮುಂಡಗೋಡ ಜೆಎಂಎಫ್‌ಸಿ ನ್ಯಾಯಾಲಯ ಬಾಪು ಪಾಟೀಲ್‌ಗೆ ನ್ಯಾಯಾಂಗ ಬಂಧನ ನೀಡಿದೆ. ಸದ್ಯ ಆರೋಪಿಯನ್ನು ಶಿರಸಿ ಸಬ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.