ಬೆಂಗಳೂರು: ಬಿಜೆಪಿ ಜಕ್ಕೂರ್ ವಾರ್ಡ್ ಮಾಜಿ ಕಾರ್ಪೊರೇಟರ್ ಮುನೀಂದ್ರ ಕುಮಾರ್ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರನ್ನು ಬರೆದ ಸ್ಥಳದಲ್ಲಿ ಚಪ್ಪಲಿ ಹಾಕಿ ನಿಂತಿರುವ ಫ್ಲೆಕ್ಸ್ ಅಳವಡಿಸುವ ಮೂಲಕ ಬಾಬಾ ಸಾಹೇಬ್ ಅವರಿಗೆ ಅವಮಾನ ಮಾಡಿರುವ ಘಟನೆ ನಡೆದಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಸರ್ಕಲ್ ನಲ್ಲಿ ಅಂಬೇಡ್ಕರ್ ಅವರ ನಾಮಫಲಕದ ಮೇಲೆ ಬಿಜೆಪಿಯ ಮಾಜಿ ಕಾರ್ಪೊರೇಟರ್ ಮುನೀಂದ್ರ ಕುಮಾರ್ ಅವರು ಫ್ಲೆಕ್ಸ್ ಹಾಕಿ ಅವಮಾನ ಮಾಡಿದ್ದರ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿಷಯ ಅರಿತ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಜಕ್ಕೂರು ಡಬಲ್ ರೋಡ್ ನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದರು.
ಈ ವಿಷಯ ಅರಿತ ಕಾರ್ಪೊರೇಟರ್ ಮುನೀಂದ್ರ ಅವರು ಘಟನೆಗೆ ಸಾರ್ವಜನಿಕವಾಗಿ ವಿಷಾದ ಕೋರಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.
ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿರುವ ಮುನೀಂದ್ರ ಅವರು, ತಾವು ಕೂಡ ಅಂಬೇಡ್ಕರ್ ಅಭಿಮಾನಿಯಾಗಿದ್ದು, ಕೆಲಸದಾಳುಗಳು ಈ ಚಿತ್ರವನ್ನು ಅರಿವಿಲ್ಲದೆ ಅಳವಡಿಸಿದ್ದಾರೆ. ವಿಷಯ ತಿಳಿದ ಬಳಿಕ ಅದನ್ನು ತೆರವುಗೊಳಿಸಿರುವುದಾಗಿ ತಿಳಿಸಿ, ಕ್ಷಮೆಯಾಚಿಸಿದ್ದಾರೆ.