ಕೊಡಗಿನ ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ಹುಲಿದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹುಲಿ ಸೆರೆ ಕಾರ್ಯಾಚರಣೆ ಚುರುಕುಗೊಳಿಸುವಂತೆ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಜಿಲ್ಲೆಯ ಜನರು ಹ್ಯಾಶ್ ಟ್ಯಾಗ್ ಅಭಿಯಾನ ಕೈಗೊಂಡಿದ್ದಾರೆ. ‘ಅರಣ್ಯ ಸಚಿವರೇ, ತಕ್ಷಣ ಕೊಡಗು ಜಿಲ್ಲೆಗೆ ಬನ್ನಿ’ ಎಂಬ ಅಭಿಯಾನ ಆರಂಭವಾಗಿದೆ.
ಪೊನ್ನಂಪೇಟೆ ತಾಲೂಕಿನಲ್ಲಿ ಮನುಷ್ಯರ ಮೇಲೆ ದಾಳಿ ನಡೆಸಿ ಅಪಾಯಕಾರಿ ಆಗಿರುವ ಹುಲಿ ಸೆರೆಯಾದ ಬಳಿಕವಷ್ಟೇ ನಾನು ಕೊಡಗು ಜಿಲ್ಲೆಗೆ ಆಗಮಿಸುತ್ತೇನೆ ಎಂದು ಲಿಂಬಾವಳಿ ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದರು. ಈ ಹೇಳಿಕೆಗೆ ಆಕ್ರೋಶಗೊಂಡ ಕೊಡಗಿನ ಜನತೆ “ ಅಧಿಕಾರಿಗಳಿಗೆ ಸ್ಪಷ್ಟ ಆದೇಶವೇ ಇಲ್ಲ. ನೆಪಕ್ಕೆ ಮಾತ್ರ ಕಾರ್ಯಾಚರಣೆ ನಡೆಯುತ್ತಿದೆ. ಕೊಡಗಿನ ಜನತೆ ಕಾಡು ಪ್ರಾಣಿಗಳ ದಾಳಿಯಿಂದ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯನ್ನು ಬಡಿದೆಬ್ಬಿಸಲು ಅರಣ್ಯ ಸಚಿವರು ತಕ್ಷಣವೇ ಕೊಡಗಿಗೆ ಭೇಟಿ ಮಾಡಲೇಬೇಕು” ಎಂದು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.