ಬೆಂಗಳೂರು: ಲಭ್ಯ ಸಂಪನ್ಮೂಲದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ನ್ಯಾಯ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸಚಿವರು ಇಂದು, ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ವೈಜ್ಞಾನಿಕ, ತಾಂತ್ರಿಕ ಹಾಗೂ ಇತರ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ, ಅಪರಾಧ ಸಾಬೀತು ಪಡಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದರಲ್ಲಿ ತಮ್ಮ ಪಾತ್ರ ಮಹತ್ತರವಾಗಿದೆ ಎಂದ ಸಚಿವರು ” ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ನ್ಯಾಯ ವಿತರಣೆ ಹಾಗೂ ನೆಮ್ಮದಿ ಕಾಪಾಡುವಲ್ಲಿ ನಿಮ್ಮದೂ ಕಾಣಿಕೆ ಇದೆ” ಎಂದರು.
ನಮ್ಮ ಸರಕಾರದ ಅವಧಿಯಲ್ಲಿ, ನ್ಯಾಯ ಪ್ರಯೋಗಾಲಯಗಳ ಬಲವರ್ಧನೆಗೆ ಆದ್ಯತೆ ನೀಡಿದ್ದು, ಮಾನವ ಸಂಪನ್ಮೂಲ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ, ಎಂದರು.
ಸಿಬ್ಬಂದಿಗಳ ಕುಂದು ಕೊರತೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ ಸಚಿವರು, ವಸತಿ ಸೌಲಭ್ಯ ಒದಗಿಸುವ ಹಾಗೂ ಹುದ್ದೆ ಹಾಗೂ ನೇಮಕಾತಿ ಸಂಬಂಧ ಇರಬಹುದಾದ ಆಡಳತಾತ್ಮಕವಾಗಿ ಸಮಸ್ಯೆ ನಿವಾರಿಸುವ ಭರವಸೆ ನೀಡಿದರು.
ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್, ಕೇಂದ್ರದ ನಿರ್ದೇಶಕ ಧರ್ಮೇಂದ್ರ ಕುಮಾರ್ ಮೀನ ಹಾಗೂ ಎಡಿಜಿಪಿ ಹಿತೇಂದ್ರ (ಅಪರಾಧ ಹಾಗೂ ತಾಂತ್ರಿಕ) ಅವರು ಉಪಸ್ಥಿತರಿದ್ದರು.