ವಿದೇಶಿ ಶಕ್ತಿಗಳಿಂದ ಪ್ರೇರಿತವಾಗಿ ಭಾರತ ಮಾನವ ಹಕ್ಕು ಉಲ್ಲಂಘಿಸುತ್ತಿದೆ ಎನ್ನುವುದು ಹೊಸ ವಾಡಿಕೆ: ಅರುಣ್‌ ಮಿಶ್ರಾ

Prasthutha|

ನವದೆಹಲಿ: ಭಾರತವು ಬಲಿಷ್ಠ ಪ್ರಜಾಪ್ರಭುತ್ವ ಹೊಂದಿರುವ ಶಕ್ತಿಯಾಗಿದೆ. ಅದರೆ, ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಶಕ್ತಿಗಳಿಂದ ಪ್ರೇರಿತವಾಗಿ ದೇಶದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎನ್ನುವ ಹೊಸ ವಾಡಿಕೆಯೊಂದು ಶುರುವಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ -ಎನ್ ಎಚ್ ಆರ್ ಸಿ ಅಧ್ಯಕ್ಷ ಅರುಣ್ ಮಿಶ್ರಾ ಮಂಗಳವಾರ ಹೇಳಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 28ನೇ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

- Advertisement -

“ಭಾರತವು ಬಲಿಷ್ಠವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಇದರ ಶ್ರೇಯವು ದೇಶದ ನಾಗರಿಕರು ಮತ್ತು ನಾಯಕತ್ವಕ್ಕೆ ಸಿಗಬೇಕು… ಆದರೆ, ಅಂತಾರಾಷ್ಟ್ರೀಯ ಶಕ್ತಿಗಳಿಂದ ಪ್ರೇರಿತವಾಗಿ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆಪಾದಿಸುವ ಹೊಸ ವಾಡಿಕೆಯೊಂದು ಶುರುವಾಗಿದೆ” ಎಂದು ನ್ಯಾ. ಮಿಶ್ರಾ ಹೇಳಿದರು.

ಹಲವು ದೇಶಗಳಲ್ಲಿ ಇರದ ಧಾರ್ಮಿಕ ಸ್ವಾತಂತ್ರ್ಯ ಭಾರತದಲ್ಲಿದೆ. ನಾಗರಿಕರು ಇಲ್ಲಿ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳನ್ನು ನಿರ್ಮಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. “ಇಂಥ ಸ್ವಾತಂತ್ರ್ಯ ಪ್ರಪಂಚದ ಬೇರೆ ದೇಶಗಳಲ್ಲಿ ಸಿಗುವುದಿಲ್ಲ. ಆದರೆ, ನಾವು ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಸಂಭ್ರಮಿಸಲಾಗದು. ತಮ್ಮ ಖಂಡನಾರ್ಹ ಕೃತ್ಯಗಳ ಮೂಲಕ ಸಂಸ್ಥೆಗಳನ್ನು ನಾಶ ಮಾಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ” ಎಂದಿದ್ದಾರೆ.

- Advertisement -

ಪೊಲೀಸರು ನಕಲಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಈ ಕೃತ್ಯ ನಿಲ್ಲಬೇಕು. ಪೊಲೀಸ್ ವ್ಯವಸ್ಥೆ ಸುಧಾರಿಸುವಂತೆ ಮಾಡಬೇಕು. ಹೀಗಾದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುವ ಅಗತ್ಯ ಬೀಳುವುದಿಲ್ಲ ಎಂದು ಮಿಶ್ರಾ ಇದೇ ವೇಳೆ ಹೇಳಿದರು.
“ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಜಾಗತಿಕವಾಗಿ ಯೋಚಿಸುತ್ತಾ ಸ್ಥಳೀಯವಾಗಿ ವರ್ತಿಸಬೇಕಾಗುತ್ತದೆ. ಭೂಮಿಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ” ಎಂದು ಅವರು ನೆನಪಿಸಿದರು.

ಕೇಂದ್ರ ಗೃಹ ಸಚಿವ್ ಅಮಿತ್ ಶಾ ಅವರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಶಕೆ ಆರಂಭವಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್ಆರ್ಸಿ) ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಬಣ್ಣಿಸಿದರು.

(ಕೃಪೆ: ಬಾರ್ & ಬೆಂಚ್)

Join Whatsapp