Home ಟಾಪ್ ಸುದ್ದಿಗಳು ಬಲವಂತದ ಧಾರ್ಮಿಕ ಮತಾಂತರ ಗಂಭೀರ ವಿಚಾರ: ಸುಪ್ರೀಂ ಕೋರ್ಟ್

ಬಲವಂತದ ಧಾರ್ಮಿಕ ಮತಾಂತರ ಗಂಭೀರ ವಿಚಾರ: ಸುಪ್ರೀಂ ಕೋರ್ಟ್

ನವದೆಹಲಿ: ಬಲವಂತದ ಧಾರ್ಮಿಕ ಮತಾಂತರವನ್ನು ಬಹಳ ಗಂಭೀರ ವಿಚಾರವೆಂದು ಪರಿಗಣಿಸಿರುವ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರವು ಕೂಡಲೇ ಮಧ್ಯಪ್ರವೇಶಿಸಿ ಇದನ್ನು ಪರಿಶೀಲಿಸಲು ಪ್ರಾಮಾಣಿಕ ಪಯತ್ನಗಳನ್ನು ಮಾಡುವಂತೆ ಸೂಚಿಸಿದೆ.

ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯದಿದ್ದರೆ ಅತ್ಯಂತ ಕಠಿಣ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸುಪ್ರೀಂ ಕೋರ್ಟ್ ಕೇಂದ್ರವನ್ನು ಎಚ್ಚರಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ಆಮಿಷಗಳ ಮೂಲಕ ನಡೆಯುವ ಈ ಪ್ರಕ್ರಿಯೆಯನ್ನು ತಡೆಯುವ ಕ್ರಮಗಳನ್ನು ಪಟ್ಟಿ ಮಾಡಲು ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಸೂಚಿಸಿದೆ.

“ಬಲವಂತದ ಮತಾಂತರವು ರಾಷ್ಟ್ರದ ಭದ್ರತೆ, ಧರ್ಮ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಆದ್ದರಿಂದ, ಭಾರತ ಒಕ್ಕೂಟವು ತಮ್ಮ ನಿಲುವನ್ನು ಸ್ಪಷ್ಟಪಡಿಸುವುದು ಮತ್ತು ಅಂತಹ ಬಲವಂತದ ಮತಾಂತರವನ್ನು ತಡೆಯಲು ಮಾಡಬೇಕಾದ ಮುಂದಿನ ಕ್ರಮಗಳನ್ನು ಪಟ್ಟಿ ಮಾಡುವಂತೆ ಪೀಠ ತಿಳಿಸಿದೆ.

“ಬೆದರಿಕೆ, ಉಡುಗೊರೆಗಳು ಮತ್ತು ಆಮಿಷ ಮತ್ತು ವಂಚನೆಯಿಂದ” ನಡೆಯುವ ಧಾರ್ಮಿಕ ಮತಾಂತರ ಪ್ರಕ್ರಿಯೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

Join Whatsapp
Exit mobile version