►ಧಾರವಾಡದಲ್ಲಿ ಆರೆಸ್ಸೆಸ್ ಬೈಠಕ್ ಸಮಾರೋಪ
ಬೆಂಗಳೂರು, ಧಾರವಾಡ : ಧಾರವಾಡ ತಾಲೂಕಿನ ಗರಗದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಆರ್ ಎಸ್ ಎಸ್ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ಕೊನೇ ದಿನವಾದ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವ-ಇಚ್ಛೆಯಿಂದ ಬೇರೆ ಧರ್ಮಗಳಿಗೆ ಮತಾಂತರವಾದರೆ ನಮ್ಮ ಅಭ್ಯಂತರವಿಲ್ಲ. ಆದರೆ ಆಮಿಷ ನೀಡಿ ಒತ್ತಾಯಪೂರ್ವಕ ಮತಾಂತರ ಸಹಿಸಲು ಸಾಧ್ಯವಿಲ್ಲ. ಇದು ಹಿಂದುಗಳ ಸಂಖ್ಯೆ ಕಡಿಮೆಗೊಳಿಸಿ ಅನ್ಯ ಧರ್ಮೀಯರ ಸಂಖ್ಯೆ ಹೆಚ್ಚಿಸುವ ಅನೈತಿಕ ಕ್ರಮವಾಗಿದೆ ಎಂದು ದೂರಿದರು.
ಮತಾಂತರ ನಿಷೇಧ ಕಾಯಿದೆಗೆ ಅಲ್ಪಸಂಖ್ಯಾತರ ವಿರೋಧವೇಕೆ ಎಂಬುದು ಸ್ಪಷ್ಟವಾಗಿದೆ. ಈಗಾಗಲೇ ಇಪ್ಪತ್ತು ರಾಜ್ಯಗಳು ಈ ಕಾಯಿದೆ ಪಾಸ್ ಮಾಡಿವೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಪಾಸಾಗಿದೆ. ರಾಜ್ಯದಲ್ಲೂ ಈ ಕಾಯಿದೆ ಪಾಸಾಗಲಿ. ಅಗತ್ಯ ಬಿದ್ದರೆ ತಿದ್ದುಪಡಿ ಮಾಡಬಹುದು. ಕಾಯಿದೆ ಬರುವ ಮುಂಚೆಯೇ ವಿರೋಧ ಮಾಡುವುದು ಸರಿಯಲ್ಲ ಎಂಬುದು ಸಂಘದ ನಿಲುವಾಗಿದೆ ಎಂದರು.
ಪ್ರತಿ ದೇಶಕ್ಕೂ ತನ್ನದೇ ಆದ ಜನಸಂಖ್ಯಾ ನಿಯಂತ್ರಣ ನೀತಿ ಇರುತ್ತದೆ. ದೇಶದ ಭೌಗೋಳಿಕ ವಿಸ್ತಾರ, ನೈಸರ್ಗಿಕ ಸಂಪನ್ಮೂಲ ಆಧರಿಸಿ ಜನಸಂಖ್ಯೆ ಇರಬೇಕು. ಜನಸಂಖ್ಯಾ ನೀತಿ ಇಡೀ ದೇಶಕ್ಕೆ ಎಲ್ಲ ಸಮುದಾಯಗಳಿಗೆ ಅನ್ವಯವಾಗುವಂತೆ ಏಕರೂಪವಾಗಿರಲಿ ಎಂಬುದು ಸಂಘದ ನಿಲುವು. ಸಂಘವು ಹಿಂದೆಯೇ ಈ ಬಗ್ಗೆ ಗೊತ್ತುವಳಿ ಸ್ವೀಕರಿಸಿದ್ದು, ಸಂಘದ ಸರಸಂಘ ಚಾಲಕ ಮೋಹನ ಭಾಗವತ ಇದನ್ನೇ ಪುನರುಚ್ಚರಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಸರ್ಕಾರ ಈಗಾಗಲೇ ಹೇಳಿದೆ. ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಅದು ಸಂಹಿತೆಯನ್ನು ಜಾರಿಗೆ ತರಬಹುದು. ಈ ಬಗ್ಗೆ ಏನು ಮಾಡುತ್ತಾರೆಯೋ ನೋಡೋಣ ಎಂದರು.
ಮುಂದಿನ ಮೂರು ವರ್ಷಗಳ ಅವಧಿವರೆಗೆ ಆರ್ ಎಸ್ ಎಸ್ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಕಾರ್ಯಕಾರಿ ಮಂಡಳಿ ಬೈಠಕ್‌ನಲ್ಲಿ ಚರ್ಚೆಯಾಗಿದ್ದು, ಸಂಘದ ಚಟುವಟಿಕೆಗಳನ್ನು ದೇಶದ ಎಲ್ಲ ಭಾಗಗಳಿಗೆ ವಿಸ್ತರಿಸಿ ಹೆಚ್ಚು ಜನರನ್ನು ಸಂಪರ್ಕಿಸಿ ಸಂಘದ ಕಾರ್ಯಚಟುವಟಿಕೆಯಲ್ಲಿ ಒಳಗೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಕರೊನಾ ಹಾವಳಿಯಿಂದ ಸ್ಥಗಿತಗೊಂಡಿದ್ದ ಶಾಖೆಗಳು ಪುನಃ ಆರಂಭವಾಗಿವೆ. ಲಾಕ್ ಡೌನ್ ಅವಧಿಯಲ್ಲಿ ಶಾಖೆಗಳು ಸ್ಥಗಿತವಾಗಿದ್ದರೂ ಲಕ್ಷಾಂತರ ಕಾರ್ಯಕರ್ತರು ತಮ್ಮ ಸೇವೆ ಮಾತ್ರ ನಿಲ್ಲಿಸಿರಲಿಲ್ಲ. ಕೋವಿಡ್ ಬಗ್ಗೆ ಜನಜಾಗೃತಿ, ಸೋಂಕಿತರ ಚಿಕಿತ್ಸೆ, ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ತೊಡಗಿದ್ದರು ಎಂದರು.
ದೇಶದ 34000 ಸ್ಥಳಗಳಲ್ಲಿ ಆರ್.ಎಸ್.ಎಸ್ ನ ನಿತ್ಯ ಶಾಖೆ, 12780 ಕಡೆಗಳಲ್ಲಿ ವಾರದ ಹಾಗೂ 7900 ಸ್ಥಳಗಳಲ್ಲಿ ತಿಂಗಳ ಶಾಖೆಗಳು ಸೇರಿದಂತೆ ಒಟ್ಟು 54382 ಶಾಖೆಗಳು ನಡೆಯುತ್ತಿವೆ. 2025ಕ್ಕೆ ಸಂಘಕ್ಕೆ 100 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ ಶಾಖೆಗಳ ಸಂಖ್ಯೆಯನ್ನು ದೇಶದ ಎಲ್ಲಾ 910 ಜಿಲ್ಲೆಗಳಿಗೆ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದರು.
ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸಂಘವು ಜನರಲ್ಲಿ ಅದೂ ಯುವ ಪೀಳಿಗೆಗೆ ಸ್ವಾತಂತ್ರೃ ಹೋರಾಟದಲ್ಲಿ ಬಲಿದಾನ ಮಾಡಿ ಇತಿಹಾಸದಲ್ಲಿ ದಾಖಲಾಗದ ವೀರರ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಅಂಡಮಾನ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಗೆ ಒಳಗಾದ ಅನೇಕರ ಬಗ್ಗೆ ಇತಿಹಾಸದಲ್ಲಿ ದಾಖಲಿಲ್ಲ. ಅಂತಹವರ ಬಗ್ಗೆ ತಿಳಿದುಕೊಳ್ಳುವ ಅವಶ್ಯವಿದ್ದು ಆ ಮಾಹಿತಿ ನೀಡುವ ಕಾರ್ಯವನ್ನು ಸಂಘ ಮಾಡಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ವ್ಯಾಟಿಕನ್ ನಲ್ಲಿ ಪೋಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹೊಸಬಾಳೆ ಅವರು, ಒಂದು ದೇಶದ ಪ್ರಧಾನಿ ಬೇರೆ ರಾಷ್ಟ್ರಗಳ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚೆ ನಡೆಸಿದರೆ ದೇಶದ ಗೌರವ ಮತ್ತಷ್ಟು ಹೆಚ್ಚುತ್ತದೆ. ಇದರಲ್ಲಿ ತಪ್ಪೇನಿಲ್ಲ ಎಂದರು.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಾರಿಸುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪರಿಸರ ಮಾಲಿನ್ಯದ ಹೆಸರಿನಲ್ಲಿ ಪಟಾಕಿ ಹಾರಿಸುವುದು ಬೇಡ ಎನ್ನುತ್ತಾರೆ. ಆದರೆ, ಈ ಪ್ರಶ್ನೆ ಕೇವಲ ದೀಪಾವಳಿ ಸಂದರ್ಭದಲ್ಲಿ ಮಾತ್ರ ಏಕೆ ಬರುತ್ತದೆ. ಪರಿಸರವನ್ನು ರಕ್ಷಿಸಲು ಪಟಾಕಿ ನಿಷೇಧ ಮಾಡುವುದಾದರೆ ಈ ಬಗ್ಗೆ ಸಮಗ್ರವಾಗಿ ಸಂಬಂಧ ಪಟ್ಟ ಎಲ್ಲರೊಂದಿಗೆ ಸುದೀರ್ಘ ಚರ್ಚೆ ಮಾಡಿ ನಿರ್ಣಯ ತೆಗೆದುಕೊಳ್ಳಬೇಕು. ಕೊನೆ ಕ್ಷಣದಲ್ಲಿ ನಿಷೇಧ ಅನೇಕರ ಜೀವನೋಪಾಯಕ್ಕೆ ಪೆಟ್ಟು ನೀಡುತ್ತದೆ. ಪಟಾಕಿಯ ಜೊತೆಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಇತರ ಎಲ್ಲ ಅಂಶಗಳನ್ನು ನಿಷೇಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು..