ಪೊಲೀಸರಿಗೆ, ಶುಚಿ ರುಚಿ ಆಹಾರ ಹಾಗೂ ಸ್ವಚ್ಚ ವಸತಿ ವ್ಯವಸ್ಥೆ ಆಗಬೇಕು: ಗೃಹ ಸಚಿವ ಆರಗ ಜ್ಞಾನೇಂದ್ರ
Prasthutha: December 15, 2021

ಬೆಳಗಾವಿ: ಗೃಹ ಸಚಿವ ಆರಗ ಜ್ಞಾನೇಂದ್ರ ಬೆಳಗಾವಿ ನಗರದಲ್ಲಿ ಅಧಿವೇಶನ ಸಂದರ್ಭದಲ್ಲಿ ಬಂದೋಬಸ್ತ್ ಗೆ ನಿಯೋಜಿತವಾಗಿರುವ ಪೊಲೀಸ್ ಸಿಬ್ಬಂದಿಗೆ ಮಾಡಲಾಗಿರುವ ವಸತಿ ಹಾಗೂ ಇತರ ಸೌಲಭ್ಯ ಗಳನ್ನು ಸ್ವತಃ ಭೇಟಿ ಮಾಡಿ, ಪರಿಶೀಲಿಸಿದರು.
ಸಚಿವರು, ಪೊಲೀಸ್ ಸಿಬ್ಬಂದಿಗಳಿಗೆ ವಿಶೇಷವಾಗಿ ತೆಗೆದುಕೊಂಡ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು ಹಾಗೂ ಪಾಕಶಾಲೆ ಸಿಬ್ಬಂದಿಗಳನ್ನು ಮಾತನಾಡಿಸಿ, ಶುಚಿ ರುಚಿ ಆಹಾರ ಒದಗಿಸಬೇಕು ಹಾಗೂ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದೂ ಸೂಚಿಸಿದರು.
ಈ ಬಾರಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ, ಬಂದೋಬಸ್ತ್ ವ್ಯವಸ್ಥೆ ನೋಡಿಕೊಳ್ಳಲು ಬಂದ ಸುಮಾರು ಐದು ಸಾವಿರ ಪೊಲೀಸ್ ಸಿಬ್ಬಂದಿಗಳಿಗೆ ಒಂದೇ ಪ್ರದೇಶದಲ್ಲಿ, ಅತ್ಯಾಧುನಿಕ ವಸತಿ, ಶೌಚಾಲಯ ಹಾಗೂ ಊಟ ಉಪಚಾರ ವ್ಯವಸ್ಥೆ ಮಾಡಲಾಗಿದೆ.
ಪೊಲೀಸ್ ಸಿಬ್ಬಂದಿಗಳಿಗೆ, ತಂಗಲು, ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದ್ದು, ಅವರಿಗಾಗಿ ವಿಶೇಷವಾದ ಟೌನ್ ಶಿಪ್ ಅನ್ನು ಬೆಳಗಾವಿ ನಗರದ ಹೊರಭಾಗದಲ್ಲಿ ನಿರ್ಮಿಸಲಾಗಿದೆ.
ಇದೇ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಸಚಿವರು ಮಾತನಾಡಿದರು.

