ಅಮರಾವತಿ: ವಿಧಾನಸಭೆಯ ಒಳಗೂ –ಹೊರಗೂ ತಮ್ಮ ಹಾಗೂ ತಮ್ಮ ಕುಟುಂಬದ ಮೇಲೆ ಕಳೆದ ಕೆಲ ಸಮಯಗಳಿಂದ ಕೇಳಿಬರುತ್ತಿರುವ ಅವಮಾನದ ಮಾತುಗಳಿಂದ ಕಣ್ಣೀರಿಟ್ಟಿರುವ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಭಾರಿ ಶಪಥವೊಂದನ್ನು ಮಾಡಿದ್ದು ಮುಖ್ಯಮಂತ್ರಿ ಆಗುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯ್ಡು, ನನ್ನ ರಾಜಕೀಯ ಜೀವನದಲ್ಲಿ ಇಷ್ಟೊಂದು ನೋವು-ಅವಮಾನ ಹಿಂದೆದೂ ಆಗಿರಲಿಲ್ಲ. ರಾಜಕೀಯ ವಿರೋಧಿಗಳು ನನ್ನ ಪತ್ನಿಯನ್ನೂ ಬಿಟ್ಟಿಲ್ಲ. ವಿಧಾನಸಭೆಯಲ್ಲಿ ನನ್ನ ಪತ್ನಿಗೂ ಅವಮಾನ ಮಾಡಲಾಗಿದೆ. YSR ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ನಿತ್ಯವೂ ನಮ್ಮನ್ನು ಟೀಕಿಸುವುದು, ನಿಂದಿಸುತ್ತಲೇ ಇರುತ್ತಾರೆ.ಇನ್ನು ಸಹಿಸುವುದು ಸಾಧ್ಯವಿಲ್ಲ. ಅಧಿಕಾರ ಸಿಗುವವರೆಗೂ ನಾನು ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ನಾನು ರಾಷ್ಟ್ರಮಟ್ಟದಲ್ಲಿ ದೊಡ್ಡ ದೊಡ್ಡ ನಾಯಕರೊಂದಿಗೆ ರಾಜಕಾರಣ ಮಾಡಿದ್ದೇನೆ. ಆದರೆ ಯಾರೂ ಕೂಡ ಇಷ್ಟು ಕೀಳಾಗಿ ನಮ್ಮನ್ನು ಕಂಡಿರಲಿಲ್ಲ. ಪ್ರತಿಯೊಂದು ವಿಷಯಕ್ಕೂ ಅನಾವಶ್ಯಕವಾಗಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಚಂದ್ರಬಾಬು ನಾಯ್ಡು ಭಾವುಕರಾದರು.