Home ಟಾಪ್ ಸುದ್ದಿಗಳು ಆರೆಸ್ಸೆಸ್-ಬಿಜೆಪಿ ಇನ್ನೆಷ್ಟು ದಿನ ಜನರನ್ನು ದಾರಿ ತಪ್ಪಿಸಲಿದೆ?: ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತಕ್ಕೆ ರಾಹುಲ್...

ಆರೆಸ್ಸೆಸ್-ಬಿಜೆಪಿ ಇನ್ನೆಷ್ಟು ದಿನ ಜನರನ್ನು ದಾರಿ ತಪ್ಪಿಸಲಿದೆ?: ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತಕ್ಕೆ ರಾಹುಲ್ ಗಾಂಧಿ ಕಿಡಿ

ನವದೆಹಲಿ: ಆರೆಸ್ಸೆಸ್ ಮತ್ತು ಬಿಜೆಪಿ ಇನ್ನೆಷ್ಟು ದಿನ ದೇಶದ ಜನರನ್ನು ದಾರಿ ತಪ್ಪಿಸಲಿದೆ ಎಂದು ಪ್ರಶ್ನಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಹಸಿವು ಸೂಚ್ಯಂಕದಲ್ಲಿ ಭಾರತ 107ನೇ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

121 ರಾಷ್ಟ್ರಗಳಲ್ಲಿ ನಡೆಸಿದ ಜಾಗತಿಕ ಹಸಿವು ಸೂಚ್ಯಂಕ (GHI) 2022 ಅಧ್ಯಯನದಲ್ಲಿ ಭಾರತ 107ನೇ ಸ್ಥಾನಕ್ಕೆ ಕುಸಿದಿರುವ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಕೇಂದ್ರದ ನಡೆಯ ವಿರುದ್ಧ ಹಿರಿಯ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವಾರು ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಹಸಿವು ಮತ್ತು ಅಪೌಷ್ಟಿಕತೆ ವಿಷಯದಲ್ಲಿ ಭಾರತವು 121 ದೇಶಗಳಲ್ಲಿ 107ನೇ ಸ್ಥಾನದಲ್ಲಿದೆ. ಈಗ ಪ್ರಧಾನಿ ಮತ್ತು ಮಂತ್ರಿಗಳು ಹೇಳುತ್ತಾರೆ, “ಭಾರತದಲ್ಲಿ ಹಸಿವಿನ ಪ್ರಮಾಣ ಬೆಳೆಯುತ್ತಿಲ್ಲ, ಬದಲಿಗೆ ಇತರ ರಾಷ್ಟ್ರಗಳು ಹಸಿವಿನಿಂದ ಬಳಲುತ್ತಿಲ್ಲ. ವಾಸ್ತವಿಕತೆಯಿಂದ ದೇಶದ ಜನರನ್ನು ದಾರಿ ತಪ್ಪಿಸುವ ಮೂಲಕ ಭಾರತವನ್ನು ದುರ್ಬಳಗೊಳಿಸಲು ಆರೆಸ್ಸೆಸ್ – ಬಿಜೆಪಿ ಇನ್ನೆಷ್ಟು ದಿನ ಕೆಲಸ ಮಾಡುತ್ತದೆ” ಎಂದು ಅವರು ಪ್ರಶ್ನಿಸಿದ್ದಾರೆ.

ಭಾರತವು GHI 2022 ರಲ್ಲಿ 121 ರಾಷ್ಟ್ರಗಳ ಪೈಕಿ 107ನೇ ಸ್ಥಾನದಲ್ಲಿದೆ. ದಕ್ಷಿಣ ಏಷ್ಯಾದ ನೆರೆಯ ಹಲವು ದೇಶಗಳನ್ನು ಹಿಂದಿಕ್ಕಿ ಈ ಸ್ಥಾನವನ್ನು ಗಳಿಸಿದೆ. ಮಕ್ಕಳ ಕ್ಷೀಣಿಸುವಿಕೆಯ ಪ್ರಮಾಣವು ಶೇಕಡಾ 19.3 ರಷ್ಟಿದ್ದು, ಇದು ವಿಶ್ವದಲ್ಲೇ ಅತ್ಯಧಿಕವಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರವು ಜಾಗತಿಕ ಹಸಿವಿನ ಸೂಚ್ಯಂಕ ವರದಿಯನ್ನು ತಿರಸ್ಕರಿಸಿದೆ. ತಪ್ಪು ಮಾಹಿತಿ ಎಂಬುದು ವಾರ್ಷಿಕವಾಗಿ ಬಿಡುಗಡೆಯಾಗುವ ಜಾಗತಿಕ ಹಸಿವಿನ ಸೂಚ್ಯಂಕದ ವಿಶಿಷ್ಟ ಲಕ್ಷಣವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

ಈ ವೈಫಲ್ಯದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ವಿಪಕ್ಷ ನಾಯಕರು ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಹೆಸರೆತ್ತದೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಮೆರಿಕದಲ್ಲಿ ಕೇಂದ್ರ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ “ರೂಪಾಯಿ ಕುಸಿಯುತ್ತಿಲ್ಲ, ಆದರೆ ಡಾಲರ್ ಬಲಗೊಳ್ಳುತ್ತಿದೆ.” ಎಂದು ಕುಟುಕಿದರು.

ಪ್ರಧಾನಿ ನರೇಂದ್ರ ಮೋದಿಯವರ “ನಾ ಖಾವುಂಗಾ, ನಾ ಖಾನೆ ದೂಂಗಾ” (ಲಂಚವನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಯಾರನ್ನೂ ಲಂಚ ಪಡೆಯಲು ಬಿಡುವುದಿಲ್ಲ) ಎಂಬ ಘೋಷಣೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಟಿಎಂಸಿ ಸಂಸದ ಮೊಯಿತ್ರಾ, “ಸಾಕಷ್ಟು ಅಕ್ಷರಶಃ ಮೋದಿಜಿ ಅವರ ಘೋಷಣೆ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 107/122 ಸ್ಥಾನವನ್ನು ಖಚಿತಪಡಿಸಿದೆ..” ಎಂದು ಛೇಡಿಸಿದ್ದಾರೆ.

ಭಾರತವು ಹಸಿವಿನ ಸೂಚ್ಯಂಕದಲ್ಲಿ ಮತ್ತೊಮ್ಮೆ ಕುಸಿದಿದ್ದು, ಈಗ 107 ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಹೊರತುಪಡಿಸಿ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳಿಗಿಂತ ಹಿಂದುಳಿದಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. “ಬಿಜೆಪಿಯ ವರದಿಯ ನಿರಾಕರಣೆ ಮತ್ತು ಸತ್ಯವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಭಾರತವನ್ನು ಈ ಬೃಹತ್ ಬಿಕ್ಕಟ್ಟಿಗೆ ಕಾರಣವಾಯಿತು” ಎಂದು ಅವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

Join Whatsapp
Exit mobile version