ಜರ್ಮನಿ: ಫುಟ್ಬಾಲ್ ಜಗತ್ತಿನ ಸ್ಟಾರ್ ಸ್ಟ್ರೈಕರ್ ಅರ್ಜೇಂಟೀನಾದ ಸರ್ಗಿಯೋ ಅಗ್ವೆರೊ ಅನಿವಾರ್ಯವಾಗಿ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ ಎಂಬ ಸುದ್ದಿಗೆ ಇದೀಗ ಸ್ವತಃ ಸರ್ಗಿಯೋ ಅಗ್ವೆರೋ ಟ್ವಿಟರ್’ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಟ್ವಿಟರ್ ಖಾತೆಯಲ್ಲಿ “ಊಹಾಪೋಹಗಳನ್ನು ನಂಬಬೇಡಿ. ನಾನು ನನ್ನ ಕ್ಲಬ್ ಬಾರ್ಸಿಲೋನಾದ ವೈದ್ಯರ ತಂಡದ ಸೂಚನೆಗಳನ್ನು ಪಾಲಿಸುತ್ತಿದ್ದೇನೆ. ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದೇನೆ ಹಾಗೂ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ. 90 ದಿನಗಳ ಕಾಲ ಆರೋಗ್ಯದಲ್ಲಿನ ಚೇತರಿಕೆಯನ್ನು ಗಮನಿಸುತ್ತೇನೆ. ಯಾವಾಗಲೂ ಧನಾತ್ಮಕವಾಗಿ ಚಿಂತಿಸಿ” ಎಂದು ಅಗ್ವೆರೊ ಟ್ವೀಟ್ ಮಾಡಿದ್ದಾರೆ.
33 ವರ್ಷದ ಬಾರ್ಸಿಲೋನಾದ ಮುಂಚೂಣಿ ಆಟಗಾರ ಸರ್ಜಿಯೋ ಅಗ್ವೆರೊ ಹೃದಯ ಸಮಸ್ಯೆಗೆ ಒಳಗಾದ ಕಾರಣ ಅಲಾವೆಸ್ ವಿರುದ್ಧದ ಪಂದ್ಯದಲ್ಲಿ ಅರ್ಧದಲ್ಲೇ ನೋವಿನಿಂದ ಹೊರನಡೆದಿದ್ದರು. ಬಳಿಕ ನಡೆಸಲಾದ ವೈದ್ಯಪರೀಕ್ಷೆಯಲ್ಲಿ ಅಗ್ವೆರೋ ತೀವ್ರತರದ ಹೃದಯ ಸಮಸ್ಯೆಯಿಂದ ಬಳಲುತ್ತಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ವೃತ್ತಿ ಜೀವನದ ಶ್ರೇಷ್ಟ ಫಾರ್ಮ್’ನಲ್ಲಿರುವಾಗಲೇ ಅನಿವಾರ್ಯವಾಗಿ ಅಗ್ವೆರೋ ನಿವೃತ್ತಿ ಷೋಷಿಸುವ ಸಾಧ್ಯತೆ ಇದೆ ಪ್ರಮುಖ ಕ್ರೀಡಾ ಮಾಧ್ಯಮಗಳು ವರದಿ ಮಾಡಿತ್ತು.
15ನೇ ವಯಸ್ಸಿನಲ್ಲಿಯೇ ವೃತ್ತಿಪರ ಫುಟ್ಬಾಲ್’ಗೆ ಪಾದಾಪರ್ಣೆಗೈಯ್ದಿದ್ದ ಅಗ್ವೆರೊ,ಇಂಗ್ಲಿಷ್ ಪ್ರೀಮಿಯರ್ ಲೀಗ್ ಕ್ಲಬ್ ಮ್ಯಾಂಚೆಸ್ಟರ್ ಸಿಟಿ ತಂಡದ ಅವಿಭಾಜ್ಯ ಅಂಗವಾಗಿದ್ದರು. EPLನಲ್ಲಿ ಅತೀಹೆಚ್ಚು ಹ್ಯಾಟ್ರಿಕ್ ಗೋಲುಗಳು (12) ಬಾರಿಸಿದ ದಾಖಲೆ ಅಗ್ವೆರೋ ಹೆಸರಿನಲ್ಲಿದೆ. ಎಲ್ಲಾ ಟೂರ್ನಿಗಳಲ್ಲಿ ಒಟ್ಟು 260 ಗೋಲುಗಳನ್ನ ಬಾರಿಸಿರುವ ಅಗ್ವೆರೊ, ಅದರಲ್ಲಿ 184 ಗೋಲುಗಳು ಇಂಗ್ಲಿಷ್ ಪ್ರೀಮಿಯರ್ ಲೀಗ್’ನಲ್ಲೇ ದಾಖಲಿಸಿದ್ದರು. ಇತ್ತೀಚೆಗಷ್ಟೇ ಮ್ಯಾಂಚೆಸ್ಟರ್ ಸಿಟಿ ತೊರೆದು ಸ್ಪ್ಯಾನಿಷ್ ಕ್ಲಬ್ ಆದ ಬಾರ್ಸಿಲೋನಾ ತಂಡವನ್ನು ಸೇರಿಕೊಂಡಿದ್ದರು. ಅರ್ಜೆಂಟೀನಾದ ಪರ 101 ಪಂದ್ಯಗಳನ್ನು ಆಡಿರುವ ಅಗ್ವೆರೋ 41 ಗೋಲು ಗಳಿಸಿದ್ದಾರೆ.