ತಿರುವನಂತಪುರಂ: ಕೇರಳದಲ್ಲಿ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ 26 ಮರಣ, ಹಲವರ ನಾಪತ್ತೆ, ಅಪಾರ ಹಾನಿಗಳಾಗಿದೆ. ಇದೀಗ ಮಳೆಯ ಪ್ರಮಾಣ ತಗ್ಗಿರುವುದು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ.
ಆದರೆ ಈ ಮಧ್ಯೆಯೇ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನೀರು ಹೊರಬಿಡಬೇಕಾದ ಅನಿವಾರ್ಯತೆ ಉಂಟಾಗಿದೆ. ಹೀಗಾದರೆ ಪ್ರವಾಹದ ಅಪಾಯದ ಸಾಧ್ಯತೆಯಿದ್ದು ತಗ್ಗು ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ. ಅಕ್ಟೋಬರ್ 18ರ ಸೋಮವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಶಬರಿಗಿರಿ ಯೋಜನೆಯ ಭಾಗವಾಗಿರುವ ಕಕ್ಕಿ ಅಣೆಕಟ್ಟೆಯ ಶಟರ್‌ಗಳನ್ನು ತೆರೆಯಲಿದ್ದು, ಮತ್ತು ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದೆ. ಇಡುಕ್ಕಿ ಜಲಾಶಯದಲ್ಲಿ ಬೆಳಿಗ್ಗೆ 7 ಗಂಟೆಗೆ ನೀರಿನ ಮಟ್ಟ 2396.90 ಅಡಿಯಿದ್ದು, ಜಿಲ್ಲಾ ಆಡಳಿತವು ಆರೆಂಜ್ ಅಲರ್ಟ್ ಘೋಷಿಸಿದೆ. ಕೇಂದ್ರ ಜಲ ಆಯೋಗವು ನಿಗದಿಪಡಿಸಿದ 2398.86 ಅಡಿಯ ಪ್ರಮಾಣಕ್ಕೆ ತಲುಪುತ್ತಿದ್ದಂತೆ ಜಲಾಶಯದ ಗೇಟ್ ಅನ್ನು ತೆರೆಯಬೇಕಾಗುತ್ತದೆ.
ಕೇರಳದ ಎರಡನೇ ಅತಿದೊಡ್ಡ ಜಲಾಶಯವಾಗಿರುವ ಇಡಮಲಯಾರ್ ಡ್ಯಾಂನಲ್ಲಿ ನೀರಿನ ಮಟ್ಟ 165.30 ಮೀ ಮುಟ್ಟಿದೆ. ಸೋಮವಾರ ಬೆಳಿಗ್ಗೆ 7 ಗಂಟೆಗೆ ಬ್ಲೂ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಸಂಪೂರ್ಣ ಜಲಾಶಯದ ಮಟ್ಟ 169 ಮೀ ಆಗಿದ್ದು, ಮೇಲಿನ ನಿಯಮದ ಪ್ರಕಾರ ಗರಿಷ್ಠ ಮಟ್ಟವನ್ನು 166.80 ಮೀ ಆಗಿದೆ. ಸದ್ಯಕ್ಕೆ ನೀರಿನ ಮಟ್ಟವು 165.8 ಮೀ ತಲುಪುವುದರಿಂದ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗುವುದು. ಈ ಪ್ರಮಾಣ 166.3 ಮೀಗೆ ಹೆಚ್ಚಳವಾದರೆ ರೆಡ್ ಅಲರ್ಟ್ ಘೋಷಿಸಲಾಗುವುದು. ಇನ್ನು, ಅಣೆಕಟ್ಟು ಪ್ರತಿ ಗಂಟೆಗೆ 0.8 MCM ಒಳಹರಿವು ಬರುತ್ತಿದ್ದು, ವಿದ್ಯುತ್ ಉತ್ಪಾದಿಸಲು ಪ್ರತಿ ಗಂಟೆಗೆ 0.023 MCM ನೀರು ಬಳಕೆ ಆಗುತ್ತಿದೆ.
ಕೇರಳದಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ ಸಹ ಮುಂದಿನ ಒಂದು ವಾರದಲ್ಲಿ ಅಣೆಕಟ್ಟೆಗಳ ಒಳಹರಿವಿನ ಪ್ರಮಾಣ ಸ್ಥಿರವಾಗಿರಲಿದೆ. ಕಕ್ಕಿ – ಆನತೋಡು ಜಲಾಶಯದ ಎರಡು ಶಟರ್‌ಗಳನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ತೆರೆಯಲಾಗುತ್ತದೆ. ಪೂರ್ಣ ಜಲಾಶಯದ ಮಟ್ಟ 981.46 ಮೀ ಮತ್ತು ನೀರಿನ ಮಟ್ಟ 979.87 ಮೀ ಆಗಿದೆ. ಪಂಪಾ ನದಿಯಲ್ಲಿ ಈಗಾಗಲೇ ನೀರಿನ ಪ್ರಮಾಣ ಪ್ರವಾಹ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿದೆ. ಇದರ ಮಧ್ಯ ಜಲಾಶಯಗಳಿಂದ ನೀರು ಹೊರ ಬಿಡುವುದರಿಂದ ಪಂಪಾ ನದಿಯಲ್ಲಿ ನೀರಿನ ಮಟ್ಟವು 10 ರಿಂದ 15 ಸೆಂ.ಮೀ. ಹೆಚ್ಚಾಗಲಿದೆ.
2018ರಲ್ಲೂ ಕೇರಳಕ್ಕೆ ಇಂಥದ್ದೇ ಪರಿಸ್ಥಿತಿ ಎದುರಾಗಿತ್ತು. 2018ರ ಆಗಸ್ಟ್ 1ರಿಂದ ಸುರಿದ ‘ನಿಲ್ಲಲರಿಯದ’ ಮಳೆಯಿಂದಾಗಿ ಜಲಾಶಯಗಳು ತುಂಬಿದ್ದವು. ಒಳಹರಿವಿನ ಪ್ರಮಾಣವೂ ಹೆಚ್ಚಾದ ಹಿನ್ನೆಲೆಯಲ್ಲಿ ಆಗಸ್ಟ್ 15ರಂದು ಎಲ್ಲಾ ಜಲಾಶಯಗಳ ಗೇಟ್ ಅನ್ನು ಏಕಕಾಲಕ್ಕೆ ತೆರಯಲಾಗಿತ್ತು. ಇಡುಕ್ಕಿ ಮತ್ತು ಇಡಮಲಯಾರ್ ಅಣೆಕಟ್ಟೆಗಳಿಂದ ಧುಮ್ಮಿಕ್ಕುವ ನೀರು ಆಲುವಾದಿಂದ ಕರಾವಳಿ ಪ್ರದೇಶಗಳಲ್ಲಿ ಭಾರೀ ಪ್ರವಾಹಕ್ಕೆ ಕಾರಣವಾಯಿತು. ಸಮುದ್ರದಲ್ಲಿ ಪ್ರಕ್ಷುಬ್ಧತೆ ಉಂಟಾಗಿದ್ದ ಕಾರಣ ನೀರು ಹರಿಯುವುದಕ್ಕೆ ಸಾಧ್ಯವಾಗಲಿಲ್ಲ, ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿತ್ತು. ಇನ್ನೊಂದೆಡೆ ಕಕ್ಕಿ – ಆನತೋಡು ಜಲಾಶಯದಿಂದ ನೀರು ಬಿಟ್ಟಿದ್ದರಿಂದಾಗಿ ಚೆಂಗನ್ನೂರು ಮತ್ತು ಅರನ್ಮುಲಾ ಪ್ರದೇಶಗಳು ಜಲಾವೃತಗೊಂಡಿದ್ದವು. ಈ ಪ್ರದೇಶಗಳಲ್ಲಿ ಎರಡು ಅಂತಸ್ತಿನ ಕಟ್ಟಡದ ಮಟ್ಟಕ್ಕೆ ನೀರು ಹರಿಯಿತು. ಇದೀಗ ಕೇರಳದಲ್ಲಿ ಈ ಬಾರಿ ಸಮುದ್ರ ಶಾಂತವಾಗಿದ್ದು, 2018ರ ಘಟನೆ ಮರುಕಳಿಸುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೂ ಜನರು ಭಯಭೀತರಾಗಿದ್ದಾರೆ.
ಅಣೆಕಟ್ಟುಗಳಿಂದ ಹಂತ ಹಂತವಾಗಿ ನೀರನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ. ಕೆಳಭಾಗದ ಪ್ರದೇಶಗಳಲ್ಲಿ ನೀರಿನ ಮಟ್ಟವನ್ನು ಮೇಲ್ವಿಚಾರಣೆ ಮಾಡುವುದರ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ಎರ್ನಾಕುಲಂ, ಪತ್ತನಂತಿಟ್ಟ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ನೀರಿನ ಮಟ್ಟ ಮೇಲ್ವಿಚಾರಣೆ ಮಾಡಲು ಹಾಗೂ ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ಬಂದಲ್ಲಿ ಜನರನ್ನು ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.