ಒಂದೇ ರನ್ ವೇಯಲ್ಲಿ ಕಾಣಿಸಿಕೊಂಡ ಭಾರತಕ್ಕೆ ಹೊರಟಿದ್ದ ವಿಮಾನಗಳು: ತಪ್ಪಿದ ಭಾರೀ ಅನಾಹುತ

Prasthutha|

ವರದಿ ಕೇಳಿದ ಭಾರತ ಸರ್ಕಾರ

- Advertisement -

ನವದೆಹಲಿ: ಭಾರತಕ್ಕೆ ಹೊರಟಿದ್ದ ಎರಡು ವಿಮಾನಗಳು ಒಂದೇ ರನ್ ವೇಯಲ್ಲಿ ಪರಸ್ಪರ ಕಾಣಿಸಿಕೊಂಡು, ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದ ಘಟನೆ ದುಬೈ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಈ ಬಗ್ಗೆ ವರದಿ ನೀಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಯುಎಇ ವಿಮಾನಯಾನ ಪ್ರಾಧಿಕಾರವನ್ನು ಕೋರಿದೆ.

- Advertisement -

ಕಳೆದ ಭಾನುವಾರ ಅಂದರೆ ಜನವರಿ 9 ರಂದು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈದರಾಬಾದ್ ಗೆ ತೆರಳಬೇಕಿದ್ದ ಎಮಿರೇಟ್ಸ್ ಬೋಯಿಂಗ್ 777 ವಿಮಾನವು ತನ್ನ ಟೇಕ್-ಆಫ್ ಆರಂಭಿಸಿತ್ತು. ಆದರೆ ಈ ವೇಳೆ ದುಬೈಯಿಂದ ಬೆಂಗಳೂರಿಗೆ ಹೊರಡಬೇಕಿದ್ದ ಎಮಿರೇಟ್ಸ್ ಬೋಯಿಂಗ್ 777 ವಿಮಾನ ಕೂಡ ತನ್ನ ಟೇಕ್ ಆಫ್ ಆರಂಭಿಸಿದೆ. ತಕ್ಷಣ ಎಚ್ಚೆತ್ತುಕೊಂಡ ವಾಯು ಸಂಚಾರ ನಿಯಂತ್ರಣದ ಅಧಿಕಾರಿಗಳು ಮಧ್ಯಪ್ರವೇಶಿಸಿ, ಹೈದರಾಬಾದ್ ಗೆ ತೆರಳಬೇಕಿದ್ದ ವಿಮಾನದ ಟೇಕ್-ಆಫ್ ಅನ್ನು ನಿಲ್ಲಿಸುವಂತೆ ಸೂಚಿಸಿದರು. ಅದರಂತೆ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದೆ.

ಈ ಘಟನೆಯ ವೇಳೆ ಎರಡೂ ಜೆಟ್ ವಿಮಾನಗಳಲ್ಲಿ ನೂರಾರು ಪ್ರಯಾಣಿಕರು ಇದ್ದರು. ಬೋಯಿಂಗ್ 777 ಟೇಕ್ ಆಫ್ ನಿಲ್ಲಿಸುವಂತೆ ಸೂಚಿಸಿದಾಗ ಅದು ಗಂಟೆಗೆ 240 ಕಿಲೋಮೀಟರ್ ವೇಗದಲ್ಲಿತ್ತು ಎಂದು ಮೂಲಗಳು ತಿಳಿಸಿವೆ.

ಎಮಿರೇಟ್ಸ್ ವಿಮಾನ ವೇಳಾಪಟ್ಟಿಯ ಪ್ರಕಾರ, ಎರಡೂ ವಿಮಾನಗಳ ನಿರ್ಗಮನ ಸಮಯದ ನಡುವೆ ಐದು ನಿಮಿಷಗಳ ಅಂತರವಿತ್ತು. ಆದರೂ ಇದು ಹೇಗೆ ಸಂಭವಿಸಿತು ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Join Whatsapp